

ಭಟ್ಕಳ: ಯೋಗದ ಮೂಲಕ ಸಮಾಜದಲ್ಲಿ ಆರೋಗ್ಯ ಮತ್ತು ಸೌಹಾರ್ದತೆಯ ಅರಿವು ಮೂಡಿಸಿ, ನಿರಂತರ ಸೇವಾಭಾವದಿಂದ ಎರಡು ದಶಕಗಳಿಗೂ ಅಧಿಕ ಕಾಲ ಸೇವ ಸಲ್ಲಿಸಿರುವ ಭಟ್ಕಳ ತಾಲೂಕಿನ ಹೆಬಳೆ ನಿವಾಸಿ, ಯೋಗಗುರು ಗೋವಿಂದ ಎನ್. ದೇವಾಡಿಗ ಅವರಿಗೆ ಪ್ರತಿಷ್ಠಿತ ‘ಭಾರತೀಯ ಯೋಗ ರತ್ನ–2026’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಭಾರತ ಸರ್ಕಾರದಲ್ಲಿ ನೋಂದಾಯಿತ ಹಾಗೂ ನೀತಿ ಆಯೋಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ‘ದಿ ಇಂಡಿಯನ್ ಫೋರಮ್ ಆಫ್ ಸೋಷಿಯಲ್ ಲೀಡರ್ಸ್ ಆ್ಯಂಡ್ ಅಚೀವರ್ಸ್’ ಸಂಸ್ಥೆಯು ಮಂಗಳೂರಿನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಯೋಗಾಭ್ಯಾಸವನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿ ಜನರಲ್ಲಿ ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಉತ್ತಮ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸಿದ ಅವರ ಅಮೂಲ್ಯ ಸಮಾಜಮುಖಿ ಸೇವೆ ಮತ್ತು ಬದ್ಧತೆಯನ್ನು ಪರಿಗಣಿಸಿ ಸಂಸ್ಥೆಯು ಈ ಗೌರವವನ್ನು ನೀಡಿದೆ.

25 ವರ್ಷಗಳ ನಿರಂತರ ಯೋಗ ಸೇವೆ:
ಗೋವಿಂದ ಎನ್. ದೇವಾಡಿಗ ಅವರು ಕಳೆದ 25 ವರ್ಷಗಳಿಂದ ಪತಂಜಲಿ ಯೋಗ ಸಮಿತಿಯ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ನೂರಾರು ಉಚಿತ ಯೋಗ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಭಟ್ಕಳ ತಾಲೂಕಿನ ಹಳ್ಳಿ-ಹಳ್ಳಿಗಳಿಗೆ ತೆರಳಿ ಎಲ್ಲ ವಯೋಮಾನದವರಿಗೂ ಯೋಗ ತರಬೇತಿ ನೀಡಿ, ಅವರ ಜೀವನದಲ್ಲಿ ಧನಾತ್ಮಕ ಬದಲಾವಣೆಗೆ ಕಾರಣರಾಗಿದ್ದಾರೆ.
ಅವರ ಸರಳ ವ್ಯಕ್ತಿತ್ವ, ಸೇವಾಮನೋಭಾವ ಹಾಗೂ ಶಿಸ್ತುಬದ್ಧ ಜೀವನಶೈಲಿಗೆ ಒಲಿದ ಈ ರಾಷ್ಟ್ರೀಯ ಮಟ್ಟದ ಗೌರವ ಭಟ್ಕಳ ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ ಮುಖಂಡರು, ಯೋಗ ಶಿಕ್ಷಕರು, ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಗೋವಿಂದ ದೇವಾಡಿಗ ಅವರಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.

About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ