August 24, 2026

ಮಾದಾಪುರ ಗೇಟ್‌ನಲ್ಲಿ ಎಲ್ಲಾ ವೇಗದೂತ ಬಸ್‌ಗಳ ನಿಲುಗಡೆಗೆ ಸರ್ಕಾರದಿಂದ ಆದೇಶ: ನಾಮಫಲಕ ಅಳವಡಿಕೆ

ಕಿಕ್ಕೇರಿ:  ಮಾದಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಸರ್ಕಾರಿ ವೇಗದೂತ ಹಾಗೂ ಸಾಮಾನ್ಯ ಸಾರಿಗೆ ಬಸ್‌ಗಳು ಮಾದಾಪುರ ಗೇಟ್‌ ಬಳಿ ಕಡ್ಡಾಯವಾಗಿ ನಿಲ್ಲಿಸಬೇಕೆಂದು ಸರ್ಕಾರದಿಂದ ಆದೇಶ ಹೊರಬಿದ್ದಿದ್ದು, ಇಂದು ಅಧಿಕೃತವಾಗಿ ಬಸ್ ನಿಲುಗಡೆ ನಾಮಫಲಕ (ಬೋರ್ಡ್) ಅಳವಡಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಮಕೃಷ್ಣೇಗೌಡರು, “ಮಾದಾಪುರ ಗೇಟ್ ಸುತ್ತಮುತ್ತಲಿನ ಊಗಿನಹಳ್ಳಿ, ಗಾಣದಹಳ್ಳಿ, ಕಡಹೆಮ್ಮಿಗೆ, ಗೊಂದಹಳ್ಳಿ, ತೊಳಸಿ, ಕಾಂತರಾಜಪುರ, ಐಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು, ರೈತರು ಹಾಗೂ ವೃದ್ಧರು ಶಾಲಾ-ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ ಮತ್ತು ದಿನನಿತ್ಯದ ಕೆಲಸಗಳಿಗಾಗಿ ನಗರ ಪ್ರದೇಶಗಳಿಗೆ ಸಂಚರಿಸುತ್ತಾರೆ. ಆದರೆ, ವೇಗದೂತ ಬಸ್‌ಗಳು ಇಲ್ಲಿ ನಿಲ್ಲದೆ ತೆರಳುತ್ತಿದ್ದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು,” ಎಂದು ತಿಳಿಸಿದರು.


ಬಸ್‌ ನಿಲುಗಡೆ ಇಲ್ಲದ ಪರಿಣಾಮ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಹಾಗೂ ಸಾರ್ವಜನಿಕರ ತುರ್ತು ಪ್ರಯಾಣಕ್ಕೂ ಅಡೆತಡೆಯಾಗುತ್ತಿತ್ತು. ಇದನ್ನು ಮನಗಂಡು ಸರ್ಕಾರವು ಈಗ ಬಸ್‌ ನಿಲುಗಡೆಗೆ ಆದೇಶ ನೀಡಿದೆ.
ಬಸ್ ನಿಲ್ಲಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ:
“ಇಂದಿನಿಂದ ಈ ನಿಲುಗಡೆಯನ್ನು ಎಲ್ಲಾ ಸಾರಿಗೆ ಬ ಚಾಲಕರು ಮತ್ತು ನಿರ್ವಾಹಕರು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಬಸ್ ನಿಲ್ಲಿಸದೆ ಹೋದರೆ, ಮುಂದಿನ ದಿನಗಳಲ್ಲಿ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು,” ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನಾಗೇಗೌಡ, ಅಣ್ಣಯಪ್ಪ, ಪುಟ್ಟಲಿಂಗ, ಯೋಗಣ್ಣ, ಮಂಜು, ಟಿ. ಜೆ. ಮಂಜೇಗೌಡ, ಪಟೇಲ್, ಮಾದೇವ, ಮಂಜ, ಬಾಬು, ಕುಮಾರ್, ದಿನೇಶ್, ದೇವೇಗೌಡ, ಚೇತು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.                                     ವರದಿ : ಶಂಭು ಕಿಕ್ಕೇರಿ

About The Author

error: Content is protected !!