

20 ವರ್ಷಗಳಿಂದ ಆತಂಕದಲ್ಲೇ ದಿನ ದೂಡುತ್ತಿರುವ 200ಕ್ಕೂ ಹೆಚ್ಚು SC/ST ಬಡ ಕುಟುಂಬಗಳು

ಸ್ಥಳ ಪರಿಶೀಲಿಸಿ ಅರ್ಹರಿಗೆ ಹಕ್ಕುಪತ್ರ ಕಲ್ಪಿಸಲು ಬೆಂಬಲ ನೀಡುವ ಭರವಸೆ ನೀಡಿದ ಶಾಸಕರು

ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಮಹಿಳಾ ಸಬಲೀಕರಣ ಸಮಿತಿ

ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಂಪೆಗೌಡ ಲೇಔಟ್ ವ್ಯಾಪ್ತಿಯ ದೊಡ್ಡನಾಗಮಂಗಲ ಪ್ರದೇಶದ ‘ಮುತ್ತಪ್ಪ ಕಾವಲು’ ಎಂಬ ಸರ್ಕಾರಿ ಜಾಗದಲ್ಲಿ ಕಳೆದ 2006ರಿಂದ ನೆಲೆಸಿರುವ ನೂರಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಬಡ ಕುಟುಂಬಗಳಿಗೆ ಶಾಶ್ವತ ಹಕ್ಕುಪತ್ರ ವಿತರಿಸಬೇಕು ಹಾಗೂ ತಕ್ಷಣವೇ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ‘ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.), ಬೆಂಗಳೂರು’ ವತಿಯಿಂದ ಮಾನ್ಯ ಶಾಸಕರಾದ ಶ್ರೀ ಎಂ. ಕೃಷ್ಣಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.


20 ವರ್ಷಗಳ ನಿರಂತರ ಹೋರಾಟ – ತೀರದ ಸಂಕಷ್ಟ:
ಕಳೆದ ಎರಡು ದಶಕಗಳಿಂದ ಈ ಪ್ರದೇಶದಲ್ಲಿ ಅಸಂಘಟಿತ ಕೂಲಿ ಕಾರ್ಮಿಕರು, ವಿಧವೆಯರು, ದಿವ್ಯಾಂಗರು, ವೃದ್ಧರು ಹಾಗೂ ಬಡ ಕುಟುಂಬಗಳು ನೆಲೆಸಿದ್ದಾರೆ. ಈ ಮುಗ್ಧ ಜನರು ಭೂಗಳ್ಳರ ಮಾತು ನಂಬಿ ತಮಗಿದ್ದ ಅಲ್ಪಸ್ವಲ್ಪ ಉಳಿತಾಯದ ಹಣವನ್ನು ನೀಡಿ ಮೋಸ ಹೋಗಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ಕಂದಾಯ ಇಲಾಖೆಯ ಅಧಿಕಾರಿಗಳು ಪದೇ ಪದೇ ತೆರವು ನೋಟಿಸ್ ನೀಡುವುದು ಹಾಗೂ ಕಿರುಕುಳ ನೀಡುವುದು ನಿರಂತರವಾಗಿ ನಡೆಯುತ್ತಿದೆ.
2018–19ರಲ್ಲಿ ಶಾಶ್ವತ ಪುನರ್ವಸತಿ ಇಲ್ಲದೆ ಮನೆಗಳನ್ನು ತೆರವುಗೊಳಿಸಿದಾಗ, ದಲಿತ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರ ಬೃಹತ್ ಪ್ರತಿಭಟನೆಯ ಫಲವಾಗಿ ಸರ್ಕಾರವು ’94ಸಿ’ ಯೋಜನೆಯಡಿ ಸುಮಾರು 150 ಅರ್ಜಿಗಳನ್ನು ದಾಖಲಿಸಿಕೊಂಡಿತ್ತು. ಆದರೆ, ಇಂದಿಗೂ ಆ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದ್ದು, ಬಡ ಕುಟುಂಬಗಳ ಭವಿಷ್ಯ ತೂಗುಯ್ಯಲೆಯಲ್ಲಿದೆ. ಪ್ರಸ್ತುತ 200ಕ್ಕೂ ಹೆಚ್ಚು ಕುಟುಂಬಗಳಿದ್ದು, 1,000ಕ್ಕೂ ಹೆಚ್ಚು ಮತದಾರರಿದ್ದಾರೆ. ಇಂದಿಗೂ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಹಾಗೂ ನೈರ್ಮಲ್ಯದಂತಹ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಜನರು ದುಃಸ್ಥಿತಿಯಲ್ಲಿದ್ದಾರೆ.
ಸ್ಥಳ ಪರಿಶೀಲನೆಯ ಭರವಸೆ ನೀಡಿದ ಶಾಸಕರು:
ನಿವಾಸಿಗಳ ಸಂಕಷ್ಟವನ್ನು ಆಲಿಸಿದ ಮಾನ್ಯ ಶಾಸಕರು, “ನಿಜವಾದ ಅರ್ಹ ಬಡ ಫಲಾನುಭವಿಗಳಿಗೆ ದಾಖಲಾತಿ ಕಲ್ಪಿಸಲು ಸಂಪೂರ್ಣ ಬೆಂಬಲ ನೀಡಲಾಗುವುದು. ಈ ವಾರದಲ್ಲೇ ಕೆಂಪೆಗೌಡ ಲೇಔಟ್ನ ಈ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಲಾಗುವುದು,” ಎಂದು ಭರವಸೆ ನೀಡಿದ್ದಾರೆ.
ಸಮಿತಿಯ ಪ್ರಮುಖ ಬೇಡಿಕೆಗಳು:
94ಸಿ ಹಕ್ಕುಪತ್ರ ವಿತರಣೆ: ಈಗಾಗಲೇ ಸಲ್ಲಿಕೆಯಾಗಿರುವ 150ಕ್ಕೂ ಹೆಚ್ಚು ಅರ್ಜಿಗಳನ್ನು ಶೀಘ್ರ ಪರಿಶೀಲಿಸಿ, ಅರ್ಹರಿಗೆ 94ಸಿ ಅಡಿಯಲ್ಲಿ ತಕ್ಷಣವೇ ಹಕ್ಕುಪತ್ರ ನೀಡಬೇಕು.
ಕಿರುಕುಳ ನಿಲ್ಲಿಸುವುದು: ಪರ್ಯಾಯ ವ್ಯವಸ್ಥೆ ಮಾಡದೆ ಯಾವುದೇ ಕುಟುಂಬವನ್ನು ತೆರವುಗೊಳಿಸಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು.
ಮೂಲಭೂತ ಸೌಕರ್ಯ: ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಬೀದಿ ದೀಪಗಳ ಸೌಲಭ್ಯವನ್ನು ತಕ್ಷಣ ಒದಗಿಸಬೇಕು.
ಜಂಟಿ ಸಭೆ ಹಾಗೂ ಪರಿಶೀಲನೆ: ಶಾಸಕರ ಅಧ್ಯಕ್ಷತೆಯಲ್ಲಿ ತಹಶೀಲ್ದಾರರು, ಬಿಬಿಎಂಪಿ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ನಿವಾಸಿಗಳ ಜಂಟಿ ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
ಸಂವಿಧಾನದ ಅನುಚ್ಛೇದ 14, 21 ಮತ್ತು 46ರ ಆಶಯದಂತೆ ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಬದುಕುವ ಹಕ್ಕಿದೆ. ಒಂದು ವೇಳೆ ಈ ಬಡ ಕುಟುಂಬಗಳ ನ್ಯಾಯಯುತ ಬೇಡಿಕೆಗೆ ತಕ್ಷಣ ಸ್ಪಂದಿಸದಿದ್ದರೆ, ಸಂಘಟನೆಯ ವತಿಯಿಂದ ರಾಜ್ಯಾದ್ಯಂತ ಕಾನೂನಾತ್ಮಕ ಹಾಗೂ ಸಂವಿಧಾನಬದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಸಮಿತಿ ಎಚ್ಚರಿಸಿದೆ.
ಸಮಿತಿಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಡಾ. ಭೀಮಪುತ್ರಿ ನಾಗಮ್ಮ, ಬೆಂಗಳೂರು ನಗರ ಅಧ್ಯಕ್ಷರಾದ ತಾರಾ, ನಗರ ಉಪಾಧ್ಯಕ್ಷರಾದ ವಸಂತ ಹಾಗೂ ಕೆಂಪೆಗೌಡ ಲೇಔಟ್ನ ನೂರಾರು ನಿವಾಸಿಗಳು ಭಾಗವಹಿಸಿ ಬೆಂಬಲ ಸೂಚಿಸಿದರು.
ವರದಿ: ಮಹೇಶ್ ಶರ್ಮಾ
About The Author




More Stories
ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಮಂಕಾಳ ವೈದ್ಯ ಮಾರ್ಮಿಕ ಪ್ರತಿಕ್ರಿಯೆ: ‘ಜನರೇ ಉತ್ತರ ನೀಡುತ್ತಾರೆ’ ಎಂದ ಭಟ್ಕಳ ಶಾಸಕ!
ತಿರುಮಲ ಪ್ರಥಮ ಆರತಿ ಶಿಷ್ಟಾಚಾರ ಪ್ರಸ್ತಾಪ ಸ್ವಾಗತಾರ್ಹ: ಸಿಎಂ ನಿರ್ಧಾರ ಬೆಂಬಲಿಸಿದ ಟಿಟಿಡಿ ಸದಸ್ಯ ಎಸ್. ನರೇಶ್ ಕುಮಾರ್
ಬೆಂಗಳೂರು ಜಗನ್ನಾಥ ಭವನದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ವಿಶೇಷ ಸಭೆ: ನೂತನ ಎಂಎಲ್ಸಿ ರಘು ಕೌಟಿಲ್ಯ ಅವರಿಗೆ ಅಭಿನಂದನೆ, ಶೀಘ್ರದಲ್ಲೇ ಬೃಹತ್ ಸಮಾವೇಶ