August 22, 2026

ಶರಾವತಿ ಪಂಪ್ಡ್ ಸ್ಟೋರೇಜ್ ಬೆಂಗಳೂರಿಗೆ ನೀರು ಒಯ್ಯುವ ಹುನ್ನಾರ: ಬಂಗಾರಮಕ್ಕಿಯಲ್ಲಿ ಶ್ರೀ ಮಾರುತಿ ಗುರೂಜಿ ಆಕ್ರೋಶ

ಹೊನ್ನಾವರ: “ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಕೇವಲ ವಿದ್ಯುತ್ ಉತ್ಪಾದನೆಗೆಷ್ಟೇ ಸೀಮಿತವಾಗಿಲ್ಲ, ಇದು ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಶರಾವತಿ ನದಿಯ ನೀರನ್ನು ಒಯ್ಯುವ ಹುನ್ನಾರವಾಗಿದೆ. ಪಶ್ಚಿಮ ಘಟ್ಟದ ವಿನಾಶಕ್ಕೆ ಕಾರಣವಾಗುವ 38 ಯೋಜನೆಗಳನ್ನು ಸರ್ಕಾರ ಕೂಡಲೇ ರದ್ದು ಮಾಡಬೇಕು” ಎಂದು ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ತೀವ್ರವಾಗಿ ಒತ್ತಾಯಿಸಿದರು.
ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ‘ಪಶ್ಚಿಮ ಘಟ್ಟ ಸಂರಕ್ಷಣಾ’ ಚಾತುರ್ಮಾಸ್ಯ ವ್ರತ ಸಂಕಲ್ಪದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಮಾಧ್ಯಮದೊಂದಿಗಿನ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

“ಸೋಲಾರ್ ಹಾಗೂ ಬ್ಯಾಟರಿ ವ್ಯವಸ್ಥೆಗಳ ಮೂಲಕ ವಿದ್ಯುತ್ ಉತ್ಪಾದಿಸಲು ಅವಕಾಶವಿದ್ದರೂ, ಸರ್ಕಾರ ಜಾಣ ಕುರುಡು ಮತ್ತು ಜಾಣ ಕಿವುಡತನ ಪ್ರದರ್ಶಿಸುತ್ತಿದೆ. ಯಾವುದೇ ಕಾರಣಕ್ಕೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅವಕಾಶ ನೀಡುವುದಿಲ್ಲ. ಅಮೆರಿಕದಲ್ಲಿ ಒಂದೇ ಒಂದು ಮೀನಿನ ಸಂತತಿಗಾಗಿ 2,119 ಡ್ಯಾಂಗಳನ್ನು ಒಡೆದು ರಕ್ಷಣೆ ಮಾಡಲಾಗುತ್ತದೆ. ಆದರೆ ಶರಾವತಿಯಲ್ಲಿದ್ದ 333 ಜಾತಿಯ ಮೀನುಗಳಲ್ಲಿ ಈಗ 31 ಮಾತ್ರ ಉಳಿದಿವೆ. ಬೆದರಿಕೆಗೆ ಬಗ್ಗದೆ, ಪಶ್ಚಿಮ ಘಟ್ಟದ ರಕ್ಷಣೆಗೆ ಪ್ರಾಣ ಕೊಡಲು ಸಿದ್ಧ. ಸೆಪ್ಟೆಂಬರ್ 6 ರಂದು 6 ರಾಜ್ಯಗಳ ಪ್ರಮುಖರು ಹಾಗೂ ಯುನೆಸ್ಕೋ ಅಧಿಕಾರಿಗಳು ಇಲ್ಲಿಗೆ ಆಗಮಿಸಲಿದ್ದು, ಇದು ಬೃಹತ್ ಜನಾಂದೋಲನವಾಗಲಿದೆ ಎಂದರು.

ಅಭಿವೃದ್ಧಿಯ ಹೆಸರಿನಲ್ಲಿ ನಿರಂತರ ದಾಳಿ – ಅಖಿಲೇಶ ಚಿಪಳಿ:
ಪರಿಸರ ಹೋರಾಟಗಾರ ಅಖಿಲೇಶ ಚಿಪಳಿ ಮಾತನಾಡಿ, “ಪಶ್ಚಿಮ ಘಟ್ಟವು ದಕ್ಷಿಣ ಭಾರತದ ಜೀವನಾಡಿ. ಕೆಪಿಸಿಎಲ್ ಸಂಸ್ಥೆಯು ಬಯಲುಸೀಮೆಯ ಫೋಟೋ ತೋರಿಸಿ ಮಲೆನಾಡಿನಲ್ಲಿ ಮರಗಳೇ ಇಲ್ಲ ಎಂದು ಬಿಂಬಿಸುತ್ತಿದೆ. ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳ ಲಾಭಕ್ಕಾಗಿ ಪಶ್ಚಿಮ ಘಟ್ಟದಲ್ಲಿ 42 ಯೋಜನೆಗಳನ್ನು ಜಾರಿಗೆ ತರಲು ಹೊರಟಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರದಿಂದಲೇ ಕಾನೂನು ಉಲ್ಲಂಘನೆ – ನ್ಯಾಯವಾದಿ ವೀರೇಶ್:
ಚಿಕ್ಕಮಗಳೂರಿನ ವಕೀಲ ವೀರೇಶ್ ಮಾತನಾಡಿ, “ಅಭಯಾರಣ್ಯ ಹಾಗೂ ಸಂರಕ್ಷಿತ ವಲಯದಲ್ಲಿ ಯಾವುದೇ ಸ್ಪೋಟಕಗಳನ್ನು ಬಳಸುವಂತಿಲ್ಲ ಎಂದು ವನ್ಯಜೀವಿ ರಕ್ಷಣಾ ಕಾಯ್ದೆಯ ಸೆಕ್ಷನ್ 29, 32, 33 ಸ್ಪಷ್ಟಪಡಿಸುತ್ತವೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ಹಾಗೂ ಸೂಚನೆಗಳಿದ್ದರೂ ಸರ್ಕಾರ ಕದ್ದುಮುಚ್ಚಿ ಡಿಪಿಆರ್ ಸಿದ್ಧಪಡಿಸುತ್ತಾ ನ್ಯಾಯಾಂಗ ನಿಂದನೆ ಮಾಡುತ್ತಿದೆ” ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಧಾರವಾಡ ಐಐಟಿ ಪ್ರಾಧ್ಯಾಪಕ ಶ್ರೀಪತಿ ಎಲ್.ಕೆ. ಹಾಗೂ ಪರಿಸರ ತಜ್ಞ ಗಿರೀಶ್ ಜೆನ್ನೆ ಉಪಸ್ಥಿತರಿದ್ದು ಮಾತನಾಡಿದರು. ತದನಂತರ ಪರಿಸರ ತಜ್ಞರು ಮತ್ತು ಶ್ರೀ ಮಾರುತಿ ಗುರೂಜಿ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿ ಸಂವಾದ ನಡೆಸಿದರು.

    About The Author

    error: Content is protected !!