August 21, 2026

ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.

ಹೊನ್ನಾವರ: ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಹಾಗೂ ಅರಸು ವಿಚಾರ ವೇದಿಕೆಯ 28ನೇ ವರ್ಷಾಚರಣೆಯ ಪ್ರಯುಕ್ತ ತಾಲೂಕಿನ ವಿವಿಧ ಸಾಮಾಜಿಕ ಕಾರ್ಯಕರ್ತರನ್ನು ಹಾಗೂ ಗಣ್ಯರನ್ನು ಅವರ ಸ್ವಗೃಹದಲ್ಲೇ ಭೇಟಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸಾಧಕರ ಸ್ವಗೃಹದಲ್ಲಿ ಸನ್ಮಾನ:

ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಮಾಜ ಸೇವಕ ಅಬ್ದುಲ್ ಕರಿಂ ಇಸೂಬ್ ಸಾಬ್ ತಲ್ಕಣಿ (ಮಾಗೋಡ), ಬಳಕೂರಿನ ಮಂಡಲ ಪಂಚಾಯತಿ ಮಾಜಿ ಪ್ರಧಾನ ನಾರಾಯಣ ನಾಯ್ಕ, ಜಾತ್ಯತೀತ ಜನತಾದಳದ ಮಾಜಿ ಜಿಲ್ಲಾಧ್ಯಕ್ಷ ಗಣಪಯ್ಯ ಎಂ. ಗೌಡ (ಗುಣವಂತೆ), ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ವನಿತಾ ನಾಯ್ಕ (ಮಂಕಿ) ಹಾಗೂ ಕೆಳಗಿನೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆಗ್ನೇಸ್ ಲೂಕಾಸ್ ಫರ್ನಾಂಡಿಸ್ ಅವರ ಮನೆಗೆ ತೆರಳಿ ಅವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.

ಗಣ್ಯರ ನುಡಿನಮನ ಹಾಗೂ ಅನಿಸಿಕೆಗಳು:

ಸೂರಜ್ ನಾಯ್ಕ ಸೋನಿ (ಜೆಡಿಎಸ್ ಜಿಲ್ಲಾಧ್ಯಕ್ಷರು): “ಗಣಪಯ್ಯ ಗೌಡರು ಅದ್ಭುತ ಕೃಷಿಕರಷ್ಟೇ ಅಲ್ಲದೆ ಅನುಭವಿ ರಾಜಕಾರಣಿಯಾಗಿದ್ದವರು. ದೇವರಾಜ ಅರಸು ಅವರು ತಂದ ‘ಉಳುವವನೇ ಭೂಮಿಯ ಒಡೆಯ’ ಯೋಜನೆಯ ಪ್ರಯೋಜನವನ್ನು ಅನೇಕ ರೈತರು ಪಡೆದುಕೊಂಡಿದ್ದಾರೆ. ಅಂತಹ ಮಹಾನ್ ನಾಯಕರ ಹೆಸರಿನ ವೇದಿಕೆಯಿಂದ ಇಂದು ಗಣಪಯ್ಯ ಗೌಡರನ್ನು ಸನ್ಮಾನಿಸಿರುವುದು ವೇದಿಕೆಗೂ ಶೋಭೆ ತಂದಿದೆ.”

ಗಣಪಯ್ಯ ಎಂ. ಗೌಡ (ಸನ್ಮಾನಿತರು): “ಸಮಾಜ ಸೇವೆ ಮಾಡಬೇಕೆಂಬ ಏಕೈಕ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೆ. ದೇವರಾಜ ಅರಸು ಅವರೊಂದಿಗಿನ ಒಡನಾಟ ನನ್ನ ಬದುಕಿನ ಪ್ರಮುಖ ಘಟ್ಟ,” ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲಕುಹಾಕಿದರು.

ವಿಕ್ರಂ ನಾಯ್ಕ (ನ್ಯಾಯವಾದಿಗಳು): “ಅರಸು ವೇದಿಕೆಯು ಎಲ್ಲಾ ಜಾತಿ-ಧರ್ಮದ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ಅಭಿನಂದನಾರ್ಹ. ಕರ್ನಾಟಕಕ್ಕೆ ಅರಸು ಅವರ ಕೊಡುಗೆ ಅನನ್ಯ ಹಾಗೂ ಅವಿಸ್ಮರಣೀಯ.”

ಅನಂತ ನಾಯ್ಕ ಹೆಗ್ಗಾರ (ಅರಸು ವಿಚಾರ ವೇದಿಕೆ ಅಧ್ಯಕ್ಷರು): “ಶತಶತಮಾನಗಳಿಂದ ಶೋಷಣೆಗೆ ಒಳಗಾದವರಿಗೆ ಧ್ವನಿಯಾದವರು, ಭೂ ಸುಧಾರಣಾ ಕಾಯ್ದೆ ಹಾಗೂ ಹಾವನೂರ್ ಆಯೋಗದ ಮೂಲಕ ಮೀಸಲಾತಿ ನೀಡಿದ ಮಹಾನ್ ನಾಯಕ ಅರಸು. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದ್ದು, ಕಳೆದ 28 ವರ್ಷಗಳಿಂದ ಈ ವಿಶಿಷ್ಟ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.”

ಈ ಸಂದರ್ಭದಲ್ಲಿ ಅರಸು ವೇದಿಕೆಯ ಸದಸ್ಯರಾದ ಹನುಮಂತ ನಾಯ್ಕ, ಕೇಶವ ನಾಯ್ಕ, ಪಾಂಡುರಂಗ ಬಾಗಿಲ ವೈದ್ಯ, ಎಂ.ಡಿ. ಗೌಡ ಹೊನ್ನಾವರ, ದೀಪಕ್ ಲೋಬೊ ಕೊಡಾಣಿ, ಯಹ್ಯಾ ಖಾನ ಕೊಡ್ಲಗದ್ದೆ, ನಾರಾಯಣ ಮುಕ್ರಿ, ರಮೇಶ ಮರಾಠಿ ತಲಗೋಡ, ಶಂಕರ ನಾಯ್ಕ್ ಬೆಟ್ಕೂರ್, ಗುರು ನಾಯ್ಕ, ಶಂಕರ ಗೌಡ ಗುಣವಂತೆ, ಆರ್.ಪಿ. ನಾಯ್ಕ, ಹರಿಯಪ್ಪ ನಾಯ್ಕ, ಸಿ.ಬಿ. ನಾಯ್ಕ, ಲೋಹಿತ್ ನಾಯ್ಕ, ಕರವೇ ಅಧ್ಯಕ್ಷ ಮಂಜುನಾಥ ಗೌಡ, ಜೆಡಿಎಸ್ ಮುಖಂಡರಾದ ಸಿ.ಜಿ. ಹೆಗಡೆ (ಕುಮಟಾ), ಟಿ.ಟಿ. ನಾಯ್ಕ (ಹೊನ್ನಾವರ), ಈಶ್ವರ ನಾಯ್ಕ (ಭಟ್ಕಳ) ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.                   ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!