August 23, 2026

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಲಕ್ಷ್ಮಣ್ ಸವದಿ: ಪ್ರಗತಿಯತ್ತ ಹೊಸ ಹೆಜ್ಜೆ


ಉತ್ತರ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ಹಿರಿಯ ಹಾಗೂ ಅನುಭವಿ ರಾಜಕಾರಣಿ ಲಕ್ಷ್ಮಣ್ ಸವದಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಶಾಸಕರಾಗಿ ಹಾಗೂ ಮಾಜಿ ಉಪಮುಖ್ಯಮಂತ್ರಿಯಾಗಿ ಆಡಳಿತದಲ್ಲಿ ದೀರ್ಘ ಅನುಭವ ಹೊಂದಿರುವ ಸೌದಿ ಅವರ ನೇಮಕವು ಜಿಲ್ಲೆಯ ಜನರಲ್ಲಿ ಹೊಸ ಆಶೋತ್ತರಗಳನ್ನು ಮೂಡಿಸಲಿದೆ.


ಜಿಲ್ಲೆಯ ಪ್ರಮುಖ ಸವಾಲುಗಳು ಹಾಗೂ ನಿರೀಕ್ಷೆಗಳು:
ಉತ್ತರ ಕನ್ನಡ ಜಿಲ್ಲೆಯು ನೈಸರ್ಗಿಕ ಸೌಂದರ್ಯ, ಅರಣ್ಯ ಸಂಪತ್ತು ಹಾಗೂ ಸುದೀರ್ಘ ಕರಾವಳಿ ತೀರವನ್ನು ಹೊಂದಿದ್ದರೂ, ಹಲವು ಮೂಲಭೂತ ಸವಾಲುಗಳನ್ನು ಎದುರಿಸುತ್ತಿದೆ. ಹೊಸ ಉಸ್ತುವಾರಿ ಸಚಿವರಿಂದ ಜಿಲ್ಲೆಯ ಜನರು ಪ್ರಮುಖವಾಗಿ ಈ ಕೆಳಗಿನ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ನಿರೀಕ್ಷಿಸುತ್ತಿದ್ದಾರೆ:

ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ: ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪನೆ ದಶಕಗಳ ಬೇಡಿಕೆಯಾಗಿದೆ. ತುರ್ತು ಸಂದರ್ಭಗಳಲ್ಲಿ ಮಣಿಪಾಲ ಅಥವಾ ಮಂಗಳೂರಿಗೆ ಧಾವಿಸಬೇಕಾದ ಪರಿಸ್ಥಿತಿಯನ್ನು ತಪ್ಪಿಸಲು ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸುವುದು ಸಚಿವರಿಗಿರುವ ಮೊದಲ ಆದ್ಯತೆಯಾಗಬೇಕಿದೆ.

ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ: ಮುರುಡೇಶ್ವರ, ಗೋಕರ್ಣ, ದಾಂಡೇಲಿ, ಯಾಣ,ಹೊನ್ನಾವರ ಸೇರಿದಂತೆ ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮವನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಬೇಕಿದೆ.

ರಸ್ತೆ ಮತ್ತು ಸಾರಿಗೆ ಸಂಪರ್ಕ: ಮಳೆಗಾಲದಲ್ಲಿ ಪದೇ ಪದೇ ಎದುರಾಗುವ ಗುಡ್ಡಕುಸಿತ, ಸುಸಜ್ಜಿತವಲ್ಲದ ಹೆದ್ದಾರಿಗಳ ಸಮಸ್ಯೆಗಳಿಗೆ ಕಾಯಂ ಪರಿಹಾರ ಕಂಡುಕೊಳ್ಳುವುದು ಹಾಗೂ ಗ್ರಾಮೀಣ ಭಾಗಗಳಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯ.

ಅರಣ್ಯ ಅತಿಕ್ರಮಣದಾರರ ಸಮಸ್ಯೆ: ಜಿಲ್ಲೆಯ ಪ್ರಮುಖ ಸಮಸ್ಯೆಯಾದ ಅರಣ್ಯ ಭೂಮಿ ಹಕ್ಕು ಮತ್ತು ಭೂ ಅತಿಕ್ರಮಣದಾರರ ಸಮಸ್ಯೆಗೆ ಕಾನೂನಾತ್ಮಕ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಚಿವರ ಧೋರಣೆ ನಿರ್ಣಾಯಕವಾಗಲಿದೆ.

ಆಡಳಿತ ಯಂತ್ರವನ್ನು ದಕ್ಷತೆಯಿಂದ ಮುನ್ನಡೆಸಿದ ಅನುಭವ ಹೊಂದಿರುವ ಲಕ್ಷ್ಮಣ್ ಸವದಿ ಅವರು, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಂದಾಗಿ ಕರೆದೊಯ್ದು ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲಿದ್ದಾರೆ ಎಂಬ ಭರವಸೆ ಹೂಂದಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದ ವಿಶಿಷ್ಟ ಸವಾಲುಗಳನ್ನು ಅರ್ಥೈಸಿಕೊಂಡು ಅವರು ಕೈಗೊಳ್ಳುವ ನಿರ್ಧಾರಗಳು ಉತ್ತರ ಕನ್ನಡದ ಭವಿಷ್ಯಕ್ಕೆ ದಾರಿದೀಪವಾಗಲಿವೆ.

    About The Author

    error: Content is protected !!