

ಶಿರಸಿ (ಆಗಸ್ಟ್ 04, 2026): ವಿಶ್ವಶಾಂತಿ ಸೇವಾ ಟ್ರಸ್ಟ್, ಕರ್ನಾಟಕ ಆಶ್ರಯದಲ್ಲಿ ಆಗಸ್ಟ್ 8ರ ಶನಿವಾರದಂದು ನಗರದ ಹೊರವಲಯದ ಮುಂಡಿಗೇಸರದ ಶ್ರೀ ಗಣಪತಿ ದೇವಸ್ಥಾನದ ಆವರಣದಲ್ಲಿ ‘ಗೀತ-ನೃತ್ಯ ಸಂಗಮ’ ಸಾಂಸ್ಕೃತಿಕ ವೈಭವ ಹಾಗೂ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಅಂದು ಸಂಜೆ 4:00 ಗಂಟೆಗೆ ಆಯೋಜಿಸಲಾದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ ಹಾಗೂ ಯಕ್ಷಗಾನ ರೂಪಕಗಳ ಸಂಗಮವಿರಲಿದೆ.

ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳ ವಿವರ:
ಸಂಗೀತ ಹಾಗೂ ಭರತನಾಟ್ಯ ಸಂಜೆ (ಸಂಜೆ 4:00 ರಿಂದ):
ಪ್ರಸಿದ್ಧ ಗಾಯಕರಾದ ರಾಧಾ ದೇಸಾಯಿ (ಧಾರವಾಡ) ಹಾಗೂ ಪ್ರಸನ್ನ ವೈದ್ಯ (ಹೆಗ್ಗಾರು) ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ಹಾರ್ಮೋನಿಯಂನಲ್ಲಿ ಪ್ರಕಾಶ್ ಹೆಗಡೆ ಯಡಳ್ಳಿ ಹಾಗೂ ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜಿಬಳ ಸಾಥ್ ನೀಡಲಿದ್ದಾರೆ. ಸಂಜೆ 5:20ಕ್ಕೆ ಸಂಪದ ಹೆಗಡೆ (ಮುರೇಗಾರ) ಅವರಿಂದ ಭರತನಾಟ್ಯ ಪ್ರದರ್ಶನ ಜರುಗಲಿದೆ.



ದಿವ್ಯ ಸಾನ್ನಿಧ್ಯ ಹಾಗೂ ಗೌರವ ಸನ್ಮಾನ (ಸಂಜೆ 5:35):
ಸಭಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ಹಾಗೂ ಟ್ರಸ್ಟ್ ಅಧ್ಯಕ್ಷ ರವೀಂದ್ರ ಭಟ್ಟ ಐನಕೈ ಅಧ್ಯಕ್ಷತೆ ವಹಿಸುವರು.
ಇದೇ ಸಂದರ್ಭದಲ್ಲಿ ಶಿರಸಿಯ ವಿದ್ಯಾನಗರ ರುದ್ರಭೂಮಿ ಸಂಸ್ಥೆಯ ಮುಖ್ಯಸ್ಥ ಹಾಗೂ ಹಿರಿಯ ಬರಹಗಾರ ವೈಶಾಲಿ ವಿ.ಪಿ. ಹೆಗಡೆ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಗುವುದು. ಕಾಮಧೇನು ಸೊಸೈಟಿ ಅಧ್ಯಕ್ಷ ವಿನಾಯಕ ರಾ. ಹೆಗಡೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ರಾಜೀವ ಎಂ. ಹೆಗಡೆ ಬಳಗಂಡಿ ಉಪಸ್ಥಿತರಿರಲಿದ್ದಾರೆ.

‘ವಿಶ್ವಾಭಿಗಮನಮ್’ ಯಕ್ಷ ನೃತ್ಯ ರೂಪಕ (ಸಂಜೆ 6:40):
ಯುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಪ್ರಸ್ತುತಿಯಲ್ಲಿ ಭಗವಾನ್ ಶ್ರೀಕೃಷ್ಣನ ಲೀಲೆ ಹಾಗೂ ಗೋಕುಲ ನಿರ್ಗಮನ ಆಧಾರಿತ ‘ವಿಶ್ವಾಭಿಗಮನಮ್’ ಏಕವ್ಯಕ್ತಿ ಯಕ್ಷ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಕೊಳಗಿ ಕೇಶವ ಹೆಗಡೆ (ಭಾಗವತಿಕೆ), ಶಂಕರ ಭಾಗವತ್ ಯಲ್ಲಾಪುರ (ಮದ್ದಲೆ) ಹಾಗೂ ವಿಘ್ನೇಶ್ವರ ಗೌಡ കെಸ್ರಕೊಪ್ಪ (ಚಂಡೆ) ಸಾಥ್ ನೀಡಲಿದ್ದಾರೆ. ವಿ. ಉಮಾಕಾಂತ ಭಟ್ಟ ಕೆರೆಕೈ ನಿರ್ದೇಶನ ಹಾಗೂ ವಿನಾಯಕ ಹೆಗಡೆ ಕಲಗದ್ದೆ ಅವರ ನೃತ್ಯ ನಿರ್ದೇಶನ ಈ ರೂಪಕಕ್ಕಿದೆ.
ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಟ್ರಸ್ಟ್‌ನ ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ಮನವಿ ಮಾಡಿದ್ದಾರೆ.


About The Author




More Stories
ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ಸೆ.5ಕ್ಕೆ ಶಿರಸಿಯಲ್ಲಿ ಆಕ್ಷೇಪಣಾ ಪತ್ರ ಸಲ್ಲಿಕೆ – ರವೀಂದ್ರ ನಾಯ್ಕ
‘ಕಾಪ್ ಆಫ್ ಮಂತ್’ ಪ್ರಶಸ್ತಿಗೆ ಶಂಕರಮೂರ್ತಿ ನಾಯ್ಕ ಆಯ್ಕೆ.
ಕಸ್ತೂರಿ ರಂಗನ್ 7ನೇ ಅಧಿಸೂಚನೆಗೆ ತೀವ್ರ ವಿರೋಧ: ಜಿಲ್ಲಾದ್ಯಂತ ಲಕ್ಷಕ್ಕೂ ಮಿಕ್ಕಿ ಉಚಿತ ಆಕ್ಷೇಪಣಾ ಪತ್ರ ಸಲ್ಲಿಕೆಗೆ ನಿರ್ಧಾರ – ರವೀಂದ್ರ ನಾಯ್ಕ