

ಹೊನ್ನಾವರ: ಪಟ್ಟಣದ ಚರ್ಚ್ ರಸ್ತೆಯಲ್ಲಿರುವ ‘ಮಾರಿಯಾ ನಿಲಯ’ದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್-2 ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಯ ಜಂಟಿ ಆಶ್ರಯದಲ್ಲಿ ಗುರು ಗೌರವಾರ್ಪಣೆ, ನಿವೃತ್ತರ ಬೀಳ್ಕೊಡುಗೆ ಹಾಗೂ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಅತ್ಯಂತ ವೈಭವದಿಂದ ಜರುಗಿತು.

ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ಪುಸ್ತಕಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಮಟಾ ಡಯಟ್ ಪ್ರಾಚಾರ್ಯ ಎನ್.ಆರ್. ಹೆಗಡೆ, “ಇಲಾಖೆಯಲ್ಲಿ ನಾವು ಎಷ್ಟು ವರ್ಷ ಸೇವೆ ಸಲ್ಲಿಸಿದ್ದೇವೆ ಎನ್ನುವುದಕ್ಕಿಂತ, ಆ ಅವಧಿಯಲ್ಲಿ ಎಷ್ಟು ಜನಸ್ನೇಹಿಯಾಗಿ ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ. ಸಾಮಾನ್ಯವಾಗಿ ನಿವೃತ್ತಿಯ ನಂತರ ಸಿಗುವ ಗೌರವ ಕಡಿಮೆಯಾಗುತ್ತದೆ. ಆದರೆ, ಶಾಲೆಯು ನಿವೃತ್ತರ ಸೇವೆಯನ್ನು ಸ್ಮರಿಸಿ ಗೌರವಿಸುತ್ತಿರುವುದು ಅತ್ಯಂತ ಶ್ಲಾಘನೀಯ” ಎಂದರು.

ಕುಮಟಾ ಡಯಟ್‌ನ ನಿವೃತ್ತ ನಿರ್ದೇಶಕ ಈಶ್ವರ ಎಚ್. ನಾಯ್ಕ ಮಾತನಾಡಿ, “ಶಿಕ್ಷಕ ವೃತ್ತಿ ಲಭಿಸಲು ಪೂರ್ವಜನ್ಮದ ಪುಣ್ಯವಿರಬೇಕು. ಸಮಾಜದಲ್ಲಿ ಈ ವೃತ್ತಿಗೆ ಸಿಗುವಷ್ಟು ಗೌರವ ಬೇರೆ ಯಾವುದಕ್ಕೂ ಸಿಗುವುದಿಲ್ಲ. ಅಧಿಕಾರವಿರುವುದು ದರ್ಪ ತೋರಿಸುವುದಕ್ಕಲ್ಲ, ಸೇವೆ ಮಾಡಲು ಎನ್ನುವುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಡಬೇಕು” ಎಂದು ಕಿವಿಮಾತು ಹೇಳಿದರು.


ಇದೇ ವೇಳೆ ನಿವೃತ್ತ ಮುಖ್ಯಾಧ್ಯಾಪಕಿ ಲುವೆಜಿನ್ ಪಿಂಟೊ ಅವರ ಸುದೀರ್ಘ ಸೇವೆಯನ್ನು ಸ್ಮರಿಸಿದ ಅವರು, ವಿದ್ಯಾರ್ಥಿಗಳು ಅವರ ಮೇಲಿಟ್ಟಿರುವ ಪ್ರೀತಿ-ಗೌರವವೇ ಶಿಕ್ಷಕ ವೃತ್ತಿಯ ನೈಜ ಮಹತ್ವವನ್ನು ತೋರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ನಿರ್ದೇಶಕ ಈಶ್ವರ ಎಚ್. ನಾಯ್ಕ ಹಾಗೂ ನಿವೃತ್ತ ಮುಖ್ಯಾಧ್ಯಾಪಕಿ ಲುವೆಜಿನ್ ಪಿಂಟೊ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಲುವೆಜಿನ್ ಪಿಂಟೊ, ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಹಾಗೂ ಮಾರ್ಗದರ್ಶನ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆ ಹಾಗೂ ಹೊನ್ನಾವರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಚುನಾಯಿತ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಗೌರವಿಸಿ ಅಭಿನಂದಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸುಧೀಶ ಎಸ್. ನಾಯ್ಕ ಅಭಿನಂದನಾ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷೆ ನೇತ್ರಾವತಿ ತಾಂಡೇಲ ವಹಿಸಿದ್ದರು. ಸಮಾರಂಭದಲ್ಲಿ ಕುಮಟಾ ಉಪಪ್ರಾಂಶುಪಾಲ ಜಿ.ಎಸ್. ಭಟ್ಟ, ಶಿಕ್ಷಕರಾದ ಪಿ.ಆರ್. ನಾಯ್ಕ, ಭಾರತಿ ನಾಯ್ಕ, ಸಮನ್ವಯಾಧಿಕಾರಿ ಜಯಶ್ರೀ ನಾಯ್ಕ, ಪ್ರಕಾಶ್ ಶೇಟ್, ಫಾದರ್ ಸಾಲ್ಪಾದೊರ ಗೊನ್ಸಾಲ್ವಿಸ್, ಫಾದರ್ ಆಗ್ನಲ್ ಡಯಾಸ್, ಎಸ್.ಎಚ್. ಗೌಡ, ರೇವತಿ ನಾಯ್ಕ, ಸಿಸ್ಟರ್ ಮೆಬಲ್ ಪಿಂಟೊ, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಜಿ. ನಾಯ್ಕ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.