

ಭಟ್ಕಳ: ತಾಲೂಕಿನ ಗೊರಟೆ ಭಾಗದ ಮೀನುಗಾರರ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಮಾಸ್ತಪ್ಪ ನಾಯ್ಕ ಬಲಸೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಗೊರಟೆ ಭಾಗದ ಮೀನುಗಾರರ ಅನುಕೂಲಕ್ಕಾಗಿ ಹಾಗೂ ಆಸರೆಗಾಗಿ ಎರಡು ಸೋಲಾರ್ ಲ್ಯಾಂಪ್ ವ್ಯವಸ್ಥೆಯನ್ನು ಮಾಡಿ, ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಸಚಿವ ಹಾಗೂ ಶಾಸಕ ಮಂಕಾಳ ವೈದ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

“ಮಾಜಿ ಸಚಿವ ಮಂಕಾಳ ವೈದ್ಯ ಅವರು ಕಳೆದ ಮೂರು ವರ್ಷಗಳಿಂದ ಮೀನುಗಾರರಿಗೆ ಬರಿ ಆಶ್ವಾಸನೆಯ ಕಥೆಗಳನ್ನು ಹೇಳುತ್ತಾ ಬಂದಿದ್ದಾರೆ. ಈಗಲಾದರೂ ಸಚಿವ ಸಂಪುಟ ವಿಸ್ತರಣೆ ಮುಗಿದಿರುವುದರಿಂದ ಬೆಂಗಳೂರಿನಿಂದ ತಾಲೂಕಿಗೆ ಮರಳಿ, ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕು. ತಾವು ಮೀನುಗಾರಿಕೆ ಸಚಿವರಾಗಿದ್ದ ಅವಧಿಯಲ್ಲಿಯೂ ಕೇವಲ ಭರವಸೆ ನೀಡಿದ್ದೇ ಆಯಿತು. ಕನಿಷ್ಠ ಪಕ್ಷ ಈಗಲಾದರೂ ಮೀನುಗಾರರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಿ” ಎಂದು ಆಗ್ರಹಿಸಿದರು.

ಮುಂದುವರಿದು ಮಾತನಾಡಿದ ಅವರು, “ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಕಿಲೋಮೀಟರ್ ರಸ್ತೆ ನಿರ್ಮಿಸಲು ಮುಂದಾಗದ ನೀವು, ವೆಂಕಟಾಪುರ ನದಿಗೆ ಹೊಂದಿಕೊಂಡಿರುವ ನಿಮ್ಮ ಖಾಸಗಿ ರೆಸಾರ್ಟ್ ಹಾಗೂ ವೈಭವೀಕರಣಕ್ಕಾಗಿ ಕುಕನಿರ ಭಾಗದ ಫಾರೆಸ್ಟ್ ಲ್ಯಾಂಡ್ (ಅರಣ್ಯ ಭೂಮಿ) ಕತ್ತರಿಸಿ ರಸ್ತೆ ಅಗಲೀಕರಣ ಮಾಡಿಕೊಳ್ಳುತ್ತಿದ್ದೀರಿ. ಅಭಿವೃದ್ಧಿಯಿಲ್ಲದೆ ಸೊರಗಿರುವ ಈ ತಾಲೂಕಿನಲ್ಲಿ ನಿಮ್ಮ ವೈಯಕ್ತಿಕ ದರ್ಬಾರ್ ಮಾತ್ರ ನಡೆಯುತ್ತಿದೆ” ಎಂದು ಆರೋಪಿಸಿದರು.


ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯ ವಿಚಾರವಾಗಿ ಪ್ರಸ್ತಾಪಿಸಿ, “ಮೊನ್ನೆ ನಡೆದ ಸಂಪುಟ ವಿಸ್ತರಣೆಯಲ್ಲಿ ನಿಮ್ಮ ಹೆಸರನ್ನು ಟೈಪಿಂಗ್ ಮಿಸ್ಟೇಕ್ನಿಂದ ಕೈಬಿಟ್ಟಿದ್ದಲ್ಲ, ಕಾರ್ಯಕ್ಷಮತೆ ಮತ್ತು ಅರ್ಹತೆಯಿಲ್ಲ ಎಂಬ ಕಾರಣಕ್ಕೆ ಹೈಕಮಾಂಡ್ ನಿಮ್ಮನ್ನು ಕೈಬಿಟ್ಟಿದೆ. ಈಗಲಾದರೂ ಉಳಿದಿರುವ ಕನಿಷ್ಠ ಅವಧಿಯಲ್ಲಾದರೂ ನ್ಯಾಯಯುತವಾಗಿ ಸಾರ್ವಜನಿಕ ಕೆಲಸಗಳನ್ನು ಮಾಡಿ ಪುಣ್ಯ ಕಟ್ಟಿಕೊಳ್ಳಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಣ್ಣಪ್ಪ ಮೊಗೇರ, ಸುಬ್ರಾಯ ಮೊಗೇರ, ನಾಗೇಶ್ ಮೊಗೇರ, ನಾಗೇಂದ್ರ ಮೊಗೇರ, ಸಿರಿ ಮೊಗೇರ, ರಾದ ಕಾರ್ವಿ, ಈಶ್ವರ್ ಮೊಗೇರ, ಶ್ರೀಧರ್ ಮೊಗೇರ, ಮಾಸ್ತಿ ಮೊಗೇರ, ತಿಮ್ಮಪ್ಪ ಮೊಗೇರ, ವೆಂಕಟ್ರಮಣ ಮೊಗೇರ ಹಾಗೂ ಕುಮಾರ್ ಮೊಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ