August 24, 2026

ಕಾಳಿ ಸೇತುವೆ ಕಾಮಗಾರಿ ಪರಿಶೀಲಿಸಿದ ನೂತನ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಲಕ್ಷ್ಮಣ ಸವದಿ ಅವರು ಕಾರವಾರಕ್ಕೆ ಆಗಮಿಸಿ, ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಿರ್ಮಾಣವಾಗುತ್ತಿರುವ ಕಾಳಿ ಸೇತುವೆ ಕಾಮಗಾರಿಯನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು.

ಈ ವೇಳೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಕಾಮಗಾರಿಯ ಪ್ರಗತಿ ಸೇರಿದಂತೆ ವಿವಿಧ ಮಾಹಿತಿಗಳನ್ನು ಸಚಿವರಿಗೆ ವಿವರವಾಗಿ ನೀಡಿದರು.

ಅತಿವೃಷ್ಟಿ, ಅನಾವೃಷ್ಟಿ ವರದಿ ಸಲ್ಲಿಸಲು ಸಿಎಂ ಸೂಚನೆ:

ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, “ನೂತನ ಸಚಿವ ಸಂಪುಟ ರಚನೆಯಾದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಎಲ್ಲಾ ಸಚಿವರಿಗೆ ಜಿಲ್ಲೆಗಳ ಪ್ರವಾಸ ಕೈಗೊಂಡು ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಸ್ಥಿತಿಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ” ಎಂದು ತಿಳಿಸಿದರು.

ರಾಜ್ಯದ 31 ಜಿಲ್ಲೆಗಳಲ್ಲೂ ಸಚಿವರ ಪ್ರವಾಸ ನಡೆಯುತ್ತಿದ್ದು, ತಮಗೆ ಉತ್ತರ ಕನ್ನಡ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ. ಇಂದು ಹಾಗೂ ನಾಳೆ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.

ಸಚಿವ ಸ್ಥಾನ ಸಿಗದಿದ್ದರೂ ಅಸಮಾಧಾನವಿಲ್ಲ:

ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ದೊರೆಯದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಯಾವುದೇ ರೀತಿಯ ಅಸಮಾಧಾನವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಸರ್ಕಾರ ಮತ್ತು ಪಕ್ಷದ ಪರವಾಗಿ ಕೆಲಸ ಮಾಡಲಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಭಟ್ಕಳ ಶಾಸಕ ಮಂಕಾಳು ವೈದ್ಯ ಅವರ ಹೆಸರು ಅಂತಿಮ ಪಟ್ಟಿಯಿಂದ ಕೈಬಿಟ್ಟಿರುವ ಕುರಿತು ಮಾತನಾಡಿ, “ರಾಜಕೀಯದಲ್ಲಿ ಅವಕಾಶಗಳು ಬರುತ್ತವೆ ಮತ್ತು ಹೋಗುತ್ತವೆ. ಇಂತಹ ಬೆಳವಣಿಗೆಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸಿ ಮುಂದುವರಿಯಬೇಕು” ಎಂದರು.

ವೈರಲ್ ಆಡಿಯೋ ಹಾಗೂ ಬಿಜೆಪಿ ಹೋರಾಟಕ್ಕೆ ಪ್ರತಿಕ್ರಿಯೆ:

ಸಚಿವ ಸ್ಥಾನಕ್ಕಾಗಿ ಕೋಟ್ಯಂತರ ರೂಪಾಯಿ ಹಣದ ಬೇಡಿಕೆ ಇಡಲಾಗಿದೆ ಎನ್ನಲಾದ ವೈರಲ್ ಆಡಿಯೋ ಕುರಿತು ಮಾತನಾಡಿ, “ಈ ವಿಷಯವನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅದರ ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಬೇಕು ಮತ್ತು ಆಡಿಯೋದಲ್ಲಿ ಮಾತನಾಡಿರುವವರೇ ಸ್ಪಷ್ಟನೆ ನೀಡಬೇಕು” ಎಂದರು.

ಸಚಿವ ನಾಗೇಂದ್ರ ವಿರುದ್ಧ ಬಿಜೆಪಿ ಹೋರಾಟ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, “ನನಗೆ ಬಿಜೆಪಿಯಲ್ಲಿ 25 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವವಿದೆ. ಅವರು ಯಾವಾಗ ಹೋರಾಟ ಆರಂಭಿಸುತ್ತಾರೋ ಆಗ ಸರ್ಕಾರದಿಂದ ಸೂಕ್ತ ಉತ್ತರ ನೀಡಲಾಗುವುದು” ಎಂದು ತಿರುಗೇಟು ನೀಡಿದರು.

ಸಭಾಪತಿಗಳ ರಾಜೀನಾಮೆ ಹಾಗೂ ಹೈಕಮಾಂಡ್ ನಿರ್ದೇಶನದ ಕುರಿತು ಉತ್ತರಿಸಿ, “ಸಂವಿಧಾನಾತ್ಮಕ ಪ್ರಕ್ರಿಯೆಯಡಿ ಸ್ಥಾನ ತೆರವಾದ ಬಳಿಕ ಹೊಸ ಅಭ್ಯರ್ಥಿಯನ್ನು ನೇಮಕ ಮಾಡುವ ಕುರಿತು ಪಕ್ಷದ ವರಿಷ್ಠರು ಪತ್ರ ಬರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಆಡಳಿತಾವಧಿಯಲ್ಲೂ ಇಂತಹ ನಿರ್ಧಾರಗಳು ನಡೆದಿವೆ” ಎಂದು ತಿಳಿಸಿದರು.

ಪರಿಶೀಲನೆ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ್ ಸಸಿ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

error: Content is protected !!