

ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡೆಬಾಳ ಅಂಗನವಾಡಿ ಕೇಂದ್ರದಲ್ಲಿ 60 ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ‘ಪೋಷಣ್ ಅಭಿಯಾನ’ ಯೋಜನೆಯಡಿ ಸ್ತನ್ಯಪಾನ ಜಾಗೃತಿ ಸಭೆ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಮಮತಾ ಆರ್. ನಾಯ್ಕ ಉದ್ಘಾಟಿಸಿ, ದಾನಿಗಳ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿ ಅಭಿನಂದಿಸಿದರು.

ದಾನಿಗಳ ಸಹಾಯ ಸದಾ ಮುಂದುವರಿಯಲಿದೆ:
ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿದ ಮುಖ್ಯ ಅತಿಥಿ, ಎಲ್‌ಐಸಿ ಸಿಎಮ್ ಕ್ಲಬ್ ಏಜೆಂಟ್ ಎಮ್.ಪಿ. ಭಟ್, “ಕಳೆದ 40 ವರ್ಷಗಳಿಂದ ಎಲ್‌ಐಸಿಯಲ್ಲಿ ಕೆಲಸ ಮಾಡುತ್ತಿದ್ದು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರ ಪ್ರೋತ್ಸಾಹದಿಂದಾಗಿ ಇಂತಹ ದಾನ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಚಿಕ್ಕ ಮಕ್ಕಳಿಗೆ ನೆರವಾಗುತ್ತಿರುವುದು ಖುಷಿ ತಂದಿದೆ. ಮುಂಬರುವ ದಿನಗಳಲ್ಲೂ ನನ್ನಿಂದಾಗುವ ಸಹಾಯ ಮುಂದುವರಿಸುತ್ತೇನೆ” ಎಂದು ಭರವಸೆ ನೀಡಿದರು.

ಪ್ರಚಾರ ಬಯಸದ ಕೊಡುಗೆ ಮಾದರಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಡಿಪಿಒ ವನಿತಾ ಎಸ್. ದೇಶಭಂಡಾರಿ ಮಾತನಾಡಿ, “ದಾನಿ ಎಮ್.ಪಿ. ಭಟ್ ಅವರು ಕಳೆದ ವರ್ಷ ಮುಗ್ವಾ ಗ್ರಾ.ಪಂ. ವ್ಯಾಪ್ತಿಯ 13 ಅಂಗನವಾಡಿಗಳ 190 ಮಕ್ಕಳಿಗೆ ಹಾಗೂ ಈ ವರ್ಷ ಹೊಸಾಕುಳಿ ವ್ಯಾಪ್ತಿಯ 6 ಅಂಗನವಾಡಿಗಳ 60 ಮಕ್ಕಳಿಗೆ ಸಮವಸ್ತ್ರ ಒದಗಿಸಿದ್ದಾರೆ. ಯಾವುದೇ ಪ್ರಚಾರ ಬಯಸದೇ ಮಕ್ಕಳ ಮೇಲಿನ ಪ್ರೀತಿಯಿಂದ ಇಂತಹ ಅರ್ಥಪೂರ್ಣ ಕೊಡುಗೆ ನೀಡುತ್ತಿರುವುದು ಎಲ್ಲರಿಗೂ ಮಾದರಿ” ಎಂದು ಇಲಾಖೆಯ ಪರವಾಗಿ ಧನ್ಯವಾದ ಅರ್ಪಿಸಿದರು.


ಅಪೌಷ್ಟಿಕತೆ ತಡೆ ಹಾಗೂ ಸ್ತನ್ಯಪಾನ ಜಾಗೃತಿ:
ಮೇಲ್ವಿಚಾರಕಿ ಸುಧಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗನವಾಡಿ ಕೇಂದ್ರಗಳ ಚಟುವಟಿಕೆಗಳು, ಇಲಾಖೆಯ ಯೋಜನೆಗಳು ಹಾಗೂ ಮಕ್ಕಳ ಸಮತೋಲನ ಆಹಾರದ ಮೂಲಕ ಅಪೌಷ್ಟಿಕತೆ ತಡೆಯುವ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ‘ಪೋಷಣ್ ಅಭಿಯಾನ’ದ ಅಡಿ ಹಮ್ಮಿಕೊಳ್ಳಲಾಗಿದ್ದ ‘ಸ್ತನ್ಯಪಾನ’ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆ ಜುಲೆಖಾ ಅವರು ಎದೆಹಾಲಿನ ಪ್ರಾಮುಖ್ಯತೆ ಮತ್ತು ಮಗುವಿನ ಆರೋಗ್ಯ ನಿರ್ವಹಣೆ ಬಗ್ಗೆ ಉಪಯುಕ್ತ ಸಲಹೆ ನೀಡಿದರು.
ವೇದಿಕೆಯಲ್ಲಿ ಎಚ್.ಪಿ.ಎಸ್. ಗುಡ್ಡೆಬಾಳ ಶಾಲೆಯ ಮುಖ್ಯ ಶಿಕ್ಷಕಿ ಕಲ್ಪನಾ ಹೆಗಡೆ ಹಾಗೂ ಆರೋಗ್ಯ ಕಾರ್ಯಕರ್ತೆ ಜುಲೆಖಾ ಉಪಸ್ಥಿತರಿದ್ದರು. ಅಂಗನವಾಡಿ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಾರ್ಯಕರ್ತೆ ವಿದ್ಯಾ ನಾಯ್ಕ ಸ್ವಾಗತಿಸಿದರು, ಗೌರಿ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ 6 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.