August 24, 2026

ಭಟ್ಕಳವನ್ನು ಮಾದರಿ ತಾಲೂಕನ್ನಾಗಿಸಲು ಸಂಕಲ್ಪ ಅಗತ್ಯ: 80ನೇ ಸ್ವಾತಂತ್ರ್ಯೋತ್ಸವದಲ್ಲಿ ಎಸಿ ಜೆ. ಮಹೇಶ್ ಕರೆ

ಭಟ್ಕಳ: ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಪರಂಪರೆಯನ್ನು ಉಳಿಸಿಕೊಂಡು ಭಟ್ಕಳವನ್ನು ರಾಜ್ಯಕ್ಕೇ ಮಾದರಿ ತಾಲೂಕನ್ನಾಗಿ ರೂಪಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಭಟ್ಕಳ ಸಹಾಯಕ ಆಯುಕ್ತ (AC) ಜೆ. ಮಹೇಶ್ ಕರೆ ನೀಡಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಭಟ್ಕಳ ನಗರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವತಿಯಿಂದ ಶನಿವಾರ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಹಬಾಳ್ವೆಯ ಸಂಗಮ ಭೂಮಿ ಭಟ್ಕಳ:

ಚೆನ್ನಭೈರಾದೇವಿ ಆಳ್ವಿಕೆ ನಡೆಸಿದ ಹಾಗೂ ಸಮುದ್ರ ವ್ಯಾಪಾರದ ಪ್ರಮುಖ ಕೇಂದ್ರವಾಗಿದ್ದ ಭಟ್ಕಳವು ಕನ್ನಡ, ಕೊಂಕಣಿ, ನವಾಯತಿ, ಬ್ಯಾರಿ ಮತ್ತು ಉರ್ದು ಭಾಷೆಗಳ ಸಂಗಮಭೂಮಿಯಾಗಿದೆ.

ದೇವಾಲಯಗಳ ಘಂಟಾನಾದ, ಬಸದಿ ಪ್ರಾರ್ಥನೆ, ಮಸೀದಿಯ ಅಝಾನ್ ಹಾಗೂ ಚರ್ಚ್‌ಗಳ ಪ್ರಾರ್ಥನೆಗಳು ಒಂದೇ ಆಕಾಶದಡಿ ಮೊಳಗುವುದು ಭಟ್ಕಳದ ವೈಶಿಷ್ಟ್ಯ. ಇದು ಸಂವಿಧಾನದ ಸಹಬಾಳ್ವೆಯ ಆಶಯಕ್ಕೆ ಉತ್ತಮ ಉದಾಹರಣೆ.

ಅರಬ್ಬೀ ಸಮುದ್ರ ಹಾಗೂ ಪಶ್ಚಿಮ ಘಟ್ಟಗಳ ನಡುವೆ ಇರುವ ಭಟ್ಕಳದ ಪರಿಸರ, ಜೀವವೈವಿಧ್ಯ ಮತ್ತು ಮುರ್ಡೇಶ್ವರದಂತಹ ಪ್ರವಾಸಿ ತಾಣಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆ.

    ಕ್ಷೇತ್ರಕ್ಕೆ ₹800 ಕೋಟಿ ಅನುದಾನ: ಶಾಸಕ ಮಂಕಾಳ ವೈದ್ಯ

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಮಂಕಾಳ ವೈದ್ಯ:

    “ಕಳೆದ ಮೂರು ವರ್ಷಗಳಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು ₹800 ಕೋಟಿ ಅನುದಾನ ನೀಡಲಾಗಿದೆ. ಐದು ಗ್ಯಾರಂಟಿ ಯೋಜನೆಗಳು ಬಡವರ ಆರ್ಥಿಕತೆಗೆ ಆಸರೆಯಾಗಿದ್ದು, ಶೀಘ್ರದಲ್ಲೇ ‘ಭೂ ಗ್ಯಾರಂಟಿ’ ಯೋಜನೆಯನ್ನೂ ಜಾರಿಗೊಳಿಸಲಾಗುವುದು. ಯುವಜನತೆಯನ್ನು ಬಲಿ ಪಡೆಯುತ್ತಿರುವ ಮಾದಕ ವಸ್ತುಗಳ (ಗಾಂಜಾ) ದಂಧೆಯ ವಿರುದ್ಧ ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.”

    ಸಾಧಕರಿಗೆ ವಿಶೇಷ ಗೌರವ:

    ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕರನ್ನು ಹಾಗೂ ಆಕರ್ಷಕ ಪಥಸಂಚಲನ ನಡೆಸಿದ ಶಾಲಾ-ಕಾಲೇಜು ತಂಡಗಳನ್ನು ಗೌರವಿಸಲಾಯಿತು.

    • ಮುಖ್ಯಮಂತ್ರಿಗಳ ಪದಕ ವಿಜೇತ: ಪಿಎಸ್ಐ ನವೀನ ನಾಯ್ಕ
    • ಡಿಜಿ–ಐಜಿಪಿ ಶ್ಲಾಘನಾ ಚಿನ್ನದ ಪದಕ ವಿಜೇತ: ಹೆಡ್ ಕಾನ್‌ಸ್ಟೆಬಲ್ ದೀಪಕ್ ನಾಯ್ಕ ಈ ಇಬ್ಬರೂ ಅಧಿಕಾರಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

    ಸಮಾರಂಭದಲ್ಲಿ ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಖಾಜಾಯಾ ಅಫ್ಸಾ ಹುಜೈಫಾ, ಉಪಾಧ್ಯಕ್ಷ ಇಮ್ರಾನ್ ಲಂಕಾ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ನಾಯ್ಕ, ಡಿವೈಎಸ್ಪಿ ಬಿ. ಗಿರೀಶ್, ನಗರಸಭೆ ಆಯುಕ್ತ ಬಾಬಾಸಾಹೇಬ್ ಮಾಣೆ, ಇಒ ಪ್ರಭಾರಿ ರಾಜೇಶ್ ಮಹಾಲೆ, ಮುಖ್ಯಾಧಿಕಾರಿ ಮಂಜಪ್ಪ ಎಸ್. ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

    ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಸ್ವಾಗತಿಸಿದರೆ, ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರು.

    About The Author

    error: Content is protected !!