

ಗೋಕರ್ಣ: ಶರೀರವು ತ್ರಿಮೂರ್ತಿಗಳಿಂದ ಆವೃತವಾಗಿದ್ದು, ಬ್ರಹ್ಮ-ವಿಷ್ಣು-ರುದ್ರರೇ ಕ್ರಮವಾಗಿ ವಾತ, ಕಫ ಹಾಗೂ ಪಿತ್ತ ರೂಪದಲ್ಲಿ ನೆಲೆನಿಂತಿದ್ದಾರೆ. ಜಠರಾಗ್ನಿ ಕೇವಲ ಆಹಾರವನ್ನು ಜೀರ್ಣಿಸುವ ಶಕ್ತಿಯಲ್ಲ, ಅದು ದೈವಿಕ ಶಕ್ತಿಯ ಪ್ರತೀಕ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ **’ಅನ್ನಬ್ರಹ್ಮ ಚಾತುರ್ಮಾಸ್ಯ’**ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ‘ಜಠರಾಗ್ನಿ’ ಕುರಿತು ಶ್ರೀಗಳು ಪ್ರವಚನ ನೀಡಿದರು.

ಹಸಿವು ಎಂಬುದು ಸಾಕ್ಷಾತ್ ಪರಮಾತ್ಮನೇ ಆಗಿದ್ದು, ಜಠರಾಗ್ನಿಯು ಜೀವಶಕ್ತಿಯ ಕೇಂದ್ರವಾಗಿದೆ. ಸುಶೃತ ಹಾಗೂ ಚರಕ ಮಹರ್ಷಿಗಳ ಆಯುರ್ವೇದ ಗ್ರಂಥಗಳಲ್ಲಿಯೂ ಈ ಕುರಿತು ಸುದೀರ್ಘ ವಿಮರ್ಶೆಗಳಿದ್ದು, ಪಿತ್ತವೆಂದರೆ ಶಿವ ಎಂದು ಪ್ರತಿಪಾದಿತವಾಗಿದೆ ಎಂದು ಶ್ರೀಗಳು ವಿವರಿಸಿದರು.

ಮನಸ್ಥಿತಿ ಹಾಗೂ ಆಹಾರ: ಊಟ ಮಾಡುವಾಗ ಸಿಟ್ಟು, ದ್ವೇಷ, ಅಸೂಯೆ, ಭಯಗಳಿಂದ ಆಹಾರ ಸ್ವೀಕರಿಸಿದರೆ ರಾಕ್ಷಸ ಭಾವ ಉತ್ಪತ್ತಿಯಾಗುತ್ತದೆ. ದಯೆ, ಕರುಣೆಗಳಂತಹ ಸದ್ಭಾವ ಇದ್ದಾಗ ದೇವತಾ ಭಾವ ಮೂಡುತ್ತದೆ.


ನಿಂತು ತಿಂದರೆ ರಾಕ್ಷಸ ಗುಣ: ಓಡಾಡುತ್ತಾ, ನಿಂತುಕೊಂಡು ಆಹಾರ ಹಾಗೂ ಪಾನೀಯ ಸ್ವೀಕರಿಸುವುದು ರಾಕ್ಷಸ ಗುಣಕ್ಕೆ ಸಮಾನ. ಸಮಾಧಾನದಿಂದ ಕುಳಿತು ಆಹಾರ ಸ್ವೀಕರಿಸಿದರೆ ಸತ್ವಗುಣ ವೃದ್ಧಿಯಾಗಿ ಅದು ದೇವತೆಗಳಿಗೆ ಸಲ್ಲುತ್ತದೆ.
ಸ್ಥಳದ ಮಹತ್ವ: ಸಾತ್ವಿಕ ಆಹಾರವೇ ಆದರೂ, ಅಶುಚಿಯಾದ ಸ್ಥಳದಲ್ಲಿ ಸೇವಿಸಿದರೆ ಅದು ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಯಾವ ಅಕ್ಕಿ ಶ್ರೇಷ್ಠ?: ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿರುವ ಬಾಸುಮತಿ ಅಕ್ಕಿಯೇ ಶ್ರೇಷ್ಠವೆಂದೇನಲ್ಲ. ಆಯುರ್ವೇದದಲ್ಲಿ ತಿಳಿಸಿರುವ ‘ಶಾಷ್ಟಿಕ’ ಹಾಗೂ ‘ರಕ್ತಶಾಲಿ’ ಅಕ್ಕಿಗಳೇ ಶ್ರೇಷ್ಠ. ಜನರು ಇವುಗಳ ನಿಜವಾದ ಮೌಲ್ಯವನ್ನು ತಿಳಿದು ಸ್ವೀಕರಿಸಬೇಕು.

ಕಾರ್ಯಕ್ರಮಕ್ಕೆ ಬೆಂಗಳೂರಿನ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಶ್ರೀಶ್ರೀ ಡಾ. ಆರೂಢ ಭಾರತಿ ಸ್ವಾಮಿಗಳು ಭೇಟಿ ನೀಡಿ, ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಜಯಪ್ರಕಾಶ್ ಶೆಟ್ಟಿ ಮುಂತಾದ ಗಣ್ಯರು ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.
ಇದೇ ವೇಳೆ, ಶ್ರೀಮಠದ ಅಂಗಸಂಸ್ಥೆ ಗೋಫಲ ಟ್ರಸ್ಟ್ ವತಿಯಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು ಹಾಗೂ ನೂತನ ಉತ್ಪನ್ನ **’ಸ್ವರ್ಗಸಾರ ಸವಿಶೇಷ’**ವನ್ನು ಲೋಕಾರ್ಪಣೆ ಮಾಡಲಾಯಿತು. ಶಿರಸಿಯ ಬಾಲಚಂದ್ರ ಕೃಷ್ಣ ಹೆಗಡೆ ಕುಟುಂಬದವರಿಂದ ಗುರುಭಿಕ್ಷಾಸೇವೆ ನೆರವೇರಿದರೆ, ನಾರಾಯಣ ಹೆಗಡೆ ವಂದೂರು ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.
About The Author




More Stories
ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ ಪ್ರತಿಪಾದನೆ
ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ
ಹಸಿವು ಮತ್ತು ಆಹಾರವೇ ಜೀವಿಯ ಸರ್ವಸ್ವ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ