September 8, 2026

ಆಧಾರ್ ಸಮಸ್ಯೆಗೆ ಬೆಂಗಳೂರಿನ ಅಲೆದಾಟ ತಪ್ಪಿಸಿ: ಉತ್ತರ ಕನ್ನಡದಲ್ಲಿ ಶಾಶ್ವತ ಸೇವಾ ಕೇಂದ್ರಕ್ಕೆ ಆಗ್ರಹ

ಭಟ್ಕಳ: ಆಧಾರ್ ಕಾರ್ಡ್‌ ಪರಿಶೀಲನೆ ಹಾಗೂ ತಿದ್ದುಪಡಿ ಸೇವೆಗಳಿಗಾಗಿ ಬೆಂಗಳೂರಿಗೆ ತೆರಳಬೇಕಾದ ಸಂಕಷ್ಟ ತಪ್ಪಿಸಲು ಉತ್ತರ ಕನ್ನಡ ಜಿಲ್ಲೆಯ ಮಧ್ಯಭಾಗದಲ್ಲಿ ಸುಸಜ್ಜಿತ ಆಧಾರ್ ಸೇವಾ ಕೇಂದ್ರ ಸ್ಥಾಪಿಸಬೇಕೆಂದು ಭಟ್ಕಳ ತಾಲೂಕಿನ ನಾಗರಿಕರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಗ್ರಹಿಸಿದ್ದಾರೆ.

ಸಾರ್ವಜನಿಕರ ಸಂಕಷ್ಟ: ಬ್ಯಾಂಕಿಂಗ್, ಪಿಂಚಣಿ, ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೇವೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಆದರೆ ಬಯೋಮೆಟ್ರಿಕ್‌ ನವೀಕರಣ, ತಿದ್ದುಪಡಿ ಅಥವಾ ಹೆಚ್ಚುವರಿ ಪರಿಶೀಲನೆ ಅಗತ್ಯವಿರುವ ಪ್ರಕರಣಗಳಲ್ಲಿ ಸ್ಥಳೀಯವಾಗಿ ಪರಿಹಾರ ಸಿಗದೆ ಜನರು ಬೆಂಗಳೂರಿಗೆ ಅಲೆಯುವಂತಾಗಿದೆ.

ಆರ್ಥಿಕ ಹಾಗೂ ಸಮಯದ ನಷ್ಟ: ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಭಾಗಗಳಿಂದ ಬೆಂಗಳೂರಿಗೆ ಪ್ರಯಾಣಿಸಲು ವಯೋವೃದ್ಧರು, ಗ್ರಾಮೀಣ ಜನರು, ದಿನಗೂಲಿ ಕಾರ್ಮಿಕರು ಹೆಚ್ಚಿನ ಹಣ ಹಾಗೂ ಸಮಯವನ್ನು ವ್ಯಯಿಸಿ ತೊಂದರೆ ಅನುಭವಿಸುತ್ತಿದ್ದಾರೆ.

ಶಾಶ್ವತ ಕೇಂದ್ರಕ್ಕೆ ಒತ್ತಾಯ: ಜಿಲ್ಲೆಯ ಮಧ್ಯಭಾಗದಲ್ಲಿ ಆಧಾರ್ ಪರಿಶೀಲನೆ, ಬಯೋಮೆಟ್ರಿಕ್ ನವೀಕರಣ, ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಬದಲಾವಣೆ ಸೇರಿ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಸಿಗುವಂತೆ ಶಾಶ್ವತ ಕೇಂದ್ರ ಸ್ಥಾಪಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಮಧ್ಯವರ್ತಿಗಳ ಕಾಟವೂ ತಪ್ಪಲಿದೆ.

ಸಂಸದರಿಗೆ ಮನವಿ: ಈ ವಿಷಯವನ್ನು ಕೇಂದ್ರ ಸರ್ಕಾರ ಹಾಗೂ UIDAI ಅಧಿಕಾರಿಗಳ ಗಮನಕ್ಕೆ ತಂದು ತ್ವರಿತವಾಗಿ ಆಧಾರ್ ಸೇವಾ ಕೇಂದ್ರ ಮಂಜೂರು ಮಾಡಿಸಬೇಕೆಂದು ನಾಗರಿಕರು ಮನವಿ ಸಲ್ಲಿಸಿದ್ದಾರೆ.

    ಈ ಸಂದರ್ಭದಲ್ಲಿ ಶ್ರೀನಿವಾಸ್ ನಾಯ್ಕ, ಶ್ರೀಕಾಂತ್ ನಾಯ್ಕ್, ಮಾದೇವ ನಾಯ್ಕ, ಆರ್‌ಟಿಐ ಕಾರ್ಯಕರ್ತ ನಾಗೇಂದ್ರ ನಾಯ್ಕ್, ಪರಮೇಶ್ವರ ನಾಯ್ಕ್, ಈಶ್ವರ ಆಸರಕೇರಿ ಸೇರಿದಂತೆ ಹಲವು ನಾಗರಿಕರು ಉಪಸ್ಥಿತರಿದ್ದರು.

    About The Author

    error: Content is protected !!