ಗೋಕರ್ಣ: ಧರ್ಮಶಾಸ್ತ್ರದಲ್ಲಿ ನೀರಿನ ಶುದ್ಧತೆಗೆ ವಿಶೇಷ ಮಹತ್ವ ನೀಡಿದ್ದು, ನೀರನ್ನು ಮಲಿನ ಮಾಡುವುದು ಮಹಾಪಾಪವಾಗಿದೆ. ಧರ್ಮಶಾಸ್ತ್ರದ ಪಾಲನೆಯನ್ನು ಬಿಟ್ಟಿರುವುದರಿಂದಲೇ ಇಂದು ದೇಶ ಹಾಗೂ ನೀರಿನ ಸ್ಥಿತಿ ದುಃಸ್ಥಿತಿಗೆ ತಲುಪಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 11, 2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ನೀಡಿದರು.
ಭರತನು ರಾಮಾಯಣದಲ್ಲಿ ಶಪಥ ಮಾಡುವಾಗ “ನಾನು ರಾಮನಿಗೆ ವಂಚನೆ ಮಾಡಿದ್ದರೆ ನೀರನ್ನು ಮಲಿನ ಮಾಡಿದ ನರಕ ಸಿಗಲಿ” ಎನ್ನುತ್ತಾನೆ. ಇದು ಪೂರ್ವಜರಿಗಿದ್ದ ಜಲ ಗೌರವವನ್ನು ತೋರಿಸುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಜಲಮೂಲಗಳು ಹಾಗೂ ಪಾರಂಪರಿಕ ಸುವಸ್ತುಗಳನ್ನು ಹಾಳುಮಾಡುತ್ತಿರುವುದು ಖೇದಕರ.
ಹೇಮಂತ, ಶಿಶಿರ, ವಸಂತ ಹಾಗೂ ಗ್ರೀಷ್ಮ ಋತುಗಳ ನೀರಿನ ಗುಣಗಳನ್ನು ಆಯುರ್ವೇದ ವಿವರಿಸಿದೆ. ಹಾರೀತ ಸಂಹಿತೆಯು ನೀರನ್ನು ಪಾಪೋದಕ, ರೋಗೋದಕ, ಅಂಶೋಧಕ ಹಾಗೂ ಆರೋಗ್ಯೋದಕ ಎಂದು ನಾಲ್ಕು ವಿಧವಾಗಿ ವಿಂಗಡಿಸಿದ್ದು, ಕಾಲು ಭಾಗದಷ್ಟು ಕುದಿಸಿದ ನೀರು ‘ಆರೋಗ್ಯೋದಕ’ವಾಗಿದ್ದು ರೋಗ ನಿವಾರಣೆಗೆ ಉತ್ತಮ ಎಂದರು.

ಸಿದ್ಧಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ: ಶ್ರೀಮಠದ ಪಾರಂಪರಿಕ ಶ್ರದ್ಧಾಳುಗಳಾದ ಸಿದ್ಧಿ ಸಮಾಜದ ಬಂಧುಗಳು ಸ್ವರ್ಣಪಾದುಕಾ ಪೂಜೆ ನೆರವೇರಿಸಿದರು. ಶ್ರೀಗಳು ಮಾತನಾಡಿ ಸಿದ್ಧಿ ಸಮಾಜದ ಜೊತೆಗೆ ಶ್ರೀಮಠ ಸದಾ ಇರಲಿದೆ ಎಂದು ಆಶೀರ್ವದಿಸಿದರು. ಶಿವಾನಂದ ಸಿದ್ದಿ, ನರಸಿಂಹ ಸಿದ್ದಿ, ಕೃಷ್ಣ ಸಿದ್ದಿ, ನಾರಾಯಣ ಸಿದ್ದಿ ಮತ್ತಿತರರು ಉಪಸ್ಥಿತರಿದ್ದರು.

ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ದಂಪತಿಗಳು, ಉದ್ಯಮಿ ಆನಂದ್, ಹೈದರಾಬಾದಿನ ರಾಘವಲು ಹಾಗೂ ಧಾರವಾಡದ ಸಿದ್ಧ ಸಮಾಧಿ ಯೋಗ ಸಮಾಜದ ಸದಸ್ಯರು ಶ್ರೀಗಳ ಆಶೀರ್ವಾದ ಪಡೆದರು. ಶೇಷಗಿರಿ ಹೆಬ್ಬಾರ್ ಕುಟುಂಬಸ್ಥರು ಗುರುಭಿಕ್ಷಾ ಸೇವೆ ಸಮರ್ಪಿಸಿದ್ದು, ದಿನಪ್ರಧಾನರಾಗಿ ಗುರುಪ್ರಕಾಶ ಹೆಗಡೆ ಕೂಜಳ್ಳಿ ದಂಪತಿಗಳು ಉಪಸ್ಥಿತರಿದ್ದರು.
About The Author


More Stories
ಹಣವಂತರಿಗಿಂತ ಶುದ್ಧ ನೀರು ಕುಡಿಯುವವನೇ ನಿಜವಾದ ಯೋಗವಂತ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ಬದಲಾಗುವ ಆಧುನಿಕ ಚಿಂತನೆಗಳಿಗಿಂತ ಭಾರತೀಯ ಪರಂಪರೆಯೇ ಸಾರ್ವಕಾಲಿಕ ಸತ್ಯ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ನದಿ ನೀರನ್ನು ತಡೆಯುವುದು ಅನರ್ಥಕ್ಕೆ ಕಾರಣ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ