ಕಿಕ್ಕೇರಿ (ಕೃಷ್ಣರಾಜಪೇಟೆ): ಹೋಬಳಿಯ ಹೊಡಕಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಲೆಕ್ಕಪತ್ರ ಹಾಗೂ ಹಣಕಾಸಿನ ವ್ಯವಹಾರಗಳ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ, ಡೇರಿಗೆ ಬೀಗ ಜಡಿದು ಸಂಘದ ಕಾರ್ಯದರ್ಶಿ ಕುಮಾರಿ ಎಂಬುವವರ ವಿರುದ್ಧ ಹಾಲು ಉತ್ಪಾದಕರು ಹಾಗೂ ಸದಸ್ಯರು ಭಾರಿ ಪ್ರತಿಭಟನೆ ನಡೆಸಿದರು.
ಸಂಘದ ಹಣಕಾಸಿನ ವ್ಯವಹಾರಗಳು ಹಾಗೂ ಹಾಲು ಉತ್ಪಾದಕರಿಗೆ ಸಂಬಂಧಿಸಿದ ಪಾವತಿಗಳ ಸಂಪೂರ್ಣ ಲೆಕ್ಕಪತ್ರಗಳನ್ನು ಸದಸ್ಯರಿಗೆ ತಕ್ಷಣ ಬಹಿರಂಗಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಆರೋಪ ಹಾಗೂ ಪ್ರಮುಖ ಬೇಡಿಕೆಗಳು:
ರಾಜಕೀಯ ಹಾಗೂ ಅಕ್ರಮದ ಆರೋಪ: ಕಾರ್ಯದರ್ಶಿ ಕುಮಾರಿ ಅವರ ಪತಿ ಕುಮಾರ್ ಅವರು ಡೇರಿ ಆಡಳಿತದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕೆಲವು ನಿರ್ದೇಶಕರಿಗೆ ತಿಳಿಯದಂತೆ ಖಾಲಿ ಪೇಪರ್ಗಳಿಗೆ ಸಹಿ ಪಡೆದು, ಅವರ ಸ್ಥಾನಕ್ಕೆ ರಾಜೀನಾಮೆ ಸೃಷ್ಟಿಸಿ ಅಂಗೀಕರಿಸಲಾಗಿದೆ ಎಂದು ಆರೋಪಿಸಲಾಯಿತು.

ಸಮಗ್ರ ತನಿಖೆಗೆ ಆಗ್ರಹ: ನಿರ್ದೇಶಕರಿಗೆ ಮಾಹಿತಿ ನೀಡದೆ ಕೈಗೊಂಡಿರುವ ನಿರ್ಧಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಂಡು, ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡಬೇಕು.
ಅಕ್ರಮವೆಸಗಿದವರ ವಿರುದ್ಧ ಕ್ರಮ: ಲೆಕ್ಕಪತ್ರ ಹಾಗೂ ರಾಜೀನಾಮೆ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿಜಾಂಶ ಹೊರತರಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ರೇಣುಕಾ ವಾಸು, ಸದಸ್ಯರಾದ ಪಾರ್ವತಮ್ಮ, ಚಿಕ್ಕಮ್ಮ, ಸುನಂದ, ಲಕ್ಷ್ಮೀದೇವಿ, ರತ್ನಮ್ಮ ಹಾಗೂ ಗ್ರಾಮಸ್ಥರಾದ ಉಗ್ರಯ್ಯ, ಶಿವರಾಮು, ವಾಸು, ವೈರಮುಡಿ, ರವಿ, ಜಗ, ನಾಗೇಶ್, ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
About The Author


More Stories
ದೇವಸ್ಥಾನದ ತಡೆಗೋಡೆ ತೆರವು ವಿರೋಧಿಸಿ ಪಿಡಿಓ ವಿರುದ್ಧ ಪ್ರತಿಭಟನೆ
ಮಳೆಗಾಗಿ ಮಕ್ಕಳ ಮದುವೆ ಮಾಡಿದ ಕೋಟಹಳ್ಳಿ ಗ್ರಾಮಸ್ಥರು
ಗಂಗೇನಹಳ್ಳಿ ಕೆರೆಗೆ ನೀರು ತುಂಬಿಸುವಂತೆ ಗ್ರಾಮಸ್ಥರ ಆಗ್ರಹ: ಹೇಮಾವತಿ ಇಲಾಖೆಗೆ ಮನವಿ