ಶಿರಸಿ: ಸಮಾಜಸೇವೆ, ಮಾನವೀಯ ಕಾರ್ಯಗಳು ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ವಿಶಿಷ್ಠ ಕೊಡುಗೆಯನ್ನು ಗುರುತಿಸಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ನೀಡುವ ಪ್ರತಿಷ್ಠಿತ ‘ನಮ್ಮನೆ ಪ್ರಶಸ್ತಿ’, ‘ನಮ್ಮನೆ ಯುವ ಪುರಸ್ಕಾರ’ ಹಾಗೂ ವಿಶೇಷ ಗೌರವಕ್ಕೆ ಭಾಜನರಾದ ಸಾಧಕರ ಪಟ್ಟಿಯನ್ನು ಟ್ರಸ್ಟ್ ಪ್ರಕಟಿಸಿದೆ.
ಡಿಸೆಂಬರ್ ೧೯ರಂದು ಶಿರಸಿ ಸಮೀಪದ ಬೆಟ್ಟಕೊಪ್ಪದಲ್ಲಿ ನಡೆಯಲಿರುವ ‘ನಮ್ಮನೆ ಹಬ್ಬ-೧೫’ರ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಹಾಗೂ ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ವಿವರ:
ನಮ್ಮನೆ ಪ್ರಶಸ್ತಿಗೆ ಭಾಜನರಾದವರು:

ದತ್ತಗುರು ಹೆಗಡೆ: ಸಾಫ್ಟ್ವೇರ್ ಕ್ಷೇತ್ರದಲ್ಲಿ ಹಿರಿಯ ಹುದ್ದೆಗಳನ್ನು ನಿರ್ವಹಿಸಿರುವ ಇವರು (ಪ್ರಸ್ತುತ ವಿಪ್ರೋ ಜನರಲ್ ಮ್ಯಾನೇಜರ್), ನೂರಾರು ಯುವಕರಿಗೆ ಉದ್ಯೋಗ ಮಾರ್ಗದರ್ಶನ ನೀಡಿರುವುದಲ್ಲದೆ, ಸ್ವತಃ ಗುರುವಾಗಿ ಅನೇಕರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ವಿದ್ಯಾಪೋಷಕ ಸಂಸ್ಥೆಯ ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೂ ನೆರವಾಗುತ್ತಿದ್ದಾರೆ.
ಆಶಾ ವಿ. (ರಾಮನಗರ): ವಾರಸುದಾರರಿಲ್ಲದ ಹಾಗೂ ನಿರ್ಗತಿಕರ ೩,೦೦೦ಕ್ಕೂ ಅಧಿಕ ಅನಾಥ ಶವಗಳಿಗೆ ತಮ್ಮದೇ ಓಮಿನಿ ವಾಹನದಲ್ಲಿ ತೆರಳಿ, ಕೋವಿಡ್ನಂತಹ ಕಷ್ಟದ ಕಾಲದಲ್ಲೂ ಜೀವ ಭಯ ತೊರೆದು ಗೌರವಯುತ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
ವಿಶೇಷ ಗೌರವ ಹಾಗೂ ಯುವ ಪುರಸ್ಕಾರ:
ಜಿ.ಎಸ್. ಹೆಗಡೆ (ಸಪ್ತಕ): ಸಂಗೀತ ಕ್ಷೇತ್ರದಲ್ಲಿ ಕಳೆದ ಐದು ದಶಕಗಳಿಂದ ಅನವರತ ಸೇವೆ ಸಲ್ಲಿಸುತ್ತಿರುವ ಇವರು, ಸಾವಿರಕ್ಕೂ ಅಧಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಹೊಸ ಕಲಾವಿದರಿಗೆ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.
ಪ್ರಿಯಾಂಕಾ ಪಿ. ಹೆಗಡೆ (ನಮ್ಮನೆ ಯುವ ಪುರಸ್ಕಾರ): ಕಾನೂನು ವಿದ್ಯಾರ್ಥಿನಿಯಾಗಿರುವ ಇವರು ಕೀರ್ತನೆ, ಸಂಗೀತ, ಯೋಗ, ಯಕ್ಷಗಾನ ಹಾಗೂ ಕ್ರೀಡೆಯಲ್ಲಿ ಸಕ್ರಿಯರಾಗಿದ್ದಾರೆ. ವಿಶೇಷವಾಗಿ ‘ಅಗ್ನಿವೀರ’ ತರಬೇತಿ ನೀಡುತ್ತಿರುವ ರಾಜ್ಯದ ಪ್ರಥಮ ಮಹಿಳಾ ತರಬೇತುಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ಯಾವುದೇ ಅರ್ಜಿಗಳನ್ನು ಆಹ್ವಾನಿಸದೆ, ಕೇವಲ ಅರ್ಹತೆಯನ್ನು ಮಾತ್ರ ಮಾನದಂಡವಾಗಿಟ್ಟುಕೊಂಡು ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
About The Author


More Stories
‘ಕಂಸವಧೆ’ ತಾಳಮದ್ದಳೆಗೆ ಪ್ರೇಕ್ಷಕರು ಸಮ್ಮೋಹಿತ; ಕಲಾವಿದ ಡಾ. ಗಣಪತಿ ಭಟ್ಟ ಸಂಕದಗುಂಡಿ ಅವರಿಗೆ ಸನ್ಮಾನ
ಮಂಗಳೂರಿನ ಟೆಕ್ನೋವಾನ್ಜಾ ಸಮಾವೇಶದಲ್ಲಿ ಶಿರಸಿಯ ಪ್ರೊಭಾರತ್ ಸಂಸ್ಥೆಗೆ ಗೌರವ
ಶಿರಸಿಯಲ್ಲಿ ಅಕ್ಟೋಬರ್ 3ಕ್ಕೆ ‘ಕಂಸವಧೆ’ ತಾಳಮದ್ದಳೆ