November 23, 2026

ಸೋಮವಾರಪೇಟೆಯಲ್ಲಿ ೭೧ನೇ ಕನ್ನಡ ರಾಜ್ಯೋತ್ಸವ: ಸಮಾಜ ಸೇವಕ ಪ್ರಾಸಿಸ್ ಡಿಸೋಜ ಸೇರಿ ಸಾಧಕರಿಗೆ ಭವ್ಯ ಸನ್ಮಾನ

೨೨ ವರ್ಷಗಳ ನಿಸ್ವಾರ್ಥ ಕನ್ನಡ ಸೇವೆ ಹಾಗೂ ಮಾನವೀಯ ಕಾಯಕಕ್ಕೆ ತಾಲೂಕು ಆಡಳಿತದ ಗೌರವ

ಸೋಮವಾರಪೇಟೆ (ಕೊಡಗು): ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ೭೧ನೇ ಕನ್ನಡ ರಾಜ್ಯೋತ್ಸವ ಸಮಾರಂಭವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಈ ಹೆಮ್ಮೆಯ ವೇದಿಕೆಯಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ತಾಲೂಕು ಆಡಳಿತದ ವತಿಯಿಂದ ಭವ್ಯ ಸನ್ಮಾನ ನೆರವೇರಿತು.

ಕಳೆದ ೨೨ ವರ್ಷಗಳಿಂದ ಸತತವಾಗಿ ಕನ್ನಡಪರ ಹೋರಾಟ ಹಾಗೂ ನಿಸ್ವಾರ್ಥ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲಾಧ್ಯಕ್ಷರಾದ ಪ್ರಾಸಿಸ್ ಡಿಸೋಜ (ಫ್ರಾನ್ಸಿಸ್ ಡಿಸೋಜ) ಅವರನ್ನು ತಹಶೀಲ್ದಾರರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಶಾಲಾ ಹೊದಿಸಿ, ಹಾರ ಹಾಕಿ, ಫಲ-ಪುಷ್ಪ ಹಾಗೂ ಪುಸ್ತಕ ನೀಡಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಪ್ರಾಸಿಸ್ ಡಿಸೋಜ ಅವರ ಅಪೂರ್ವ ಸಮಾಜಮುಖಿ ಕಾಯಕ:

ರಕ್ತದಾನ ಹಾಗೂ ಜಾಗೃತಿ: ಸ್ವತಃ ೩೨ ಬಾರಿ ರಕ್ತದಾನ ಮಾಡಿರುವುದಲ್ಲದೆ, ಹಲವು ಬೃಹತ್ ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.

ಅನಾಥರ ರಕ್ಷಣೆ: ಬೀದಿ ಬದಿಯಲ್ಲಿದ್ದ ೪೦೦ಕ್ಕೂ ಹೆಚ್ಚು ನಿರ್ಗತಿಕ ಹಾಗೂ ಅನಾಥ ಜನರನ್ನು ರಕ್ಷಿಸಿ ಸೂಕ್ತ ಆಶ್ರಮಗಳಿಗೆ ಸೇರಿಸಿದ್ದಾರೆ.

ಸಂಕಷ್ಟಕ್ಕೆ ನೆರವು: ಕೋವಿಡ್ ಮಹಾಮಾರಿ ಹಾಗೂ ಕೊಡಗಿನ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೂರಾರು ಕುಟುಂಬಗಳಿಗೆ ಉಚಿತ ಆಹಾರ ಕಿಟ್ ವಿತರಿಸಿದ್ದಾರೆ.

ಆಶ್ರಯ ಹಾಗೂ ಪಿಂಚಣಿ ಸೌಲಭ್ಯ: ಬೆಂಗಳೂರಿನ ಟ್ರಸ್ಟ್‌ಗಳ ಸಹಕಾರದೊಂದಿಗೆ ಸಂಕಷ್ಟದಲ್ಲಿದ್ದ ೧೩ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಹಾಗೂ ದುರಸ್ತಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನೆರವು ಕಲ್ಪಿಸಿದ್ದಾರೆ. ಅಲ್ಲದೆ, ಅಗತ್ಯ ದಾಖಲೆಗಳನ್ನು ಒದಗಿಸಿ ೫೦೦ಕ್ಕೂ ಹೆಚ್ಚು ಅರ್ಹ ಬಡಜನರಿಗೆ ಸರ್ಕಾರಿ ಪಿಂಚಣಿ (ಪೆನ್ಷನ್) ದೊರಕಿಸಿಕೊಟ್ಟಿದ್ದಾರೆ.

ಶಿಕ್ಷಣ ಹಾಗೂ ರಸ್ತೆ ಸುರಕ್ಷತೆ: ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ಹಾಗೂ ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

    ಹಂಸ ಪಕ್ಷಿಯಂತೆ ಪಾರದರ್ಶಕ ಮನಸ್ಸಿನಿಂದ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಫ್ರಾನ್ಸಿಸ್ ಡಿಸೋಜ ಅವರ ಸೇವೆಯನ್ನು ಗುರುತಿಸಿ ನೀಡಿರುವ ಈ ಗೌರವ ಅತ್ಯಂತ ಸೂಕ್ತ ಹಾಗೂ ಪ್ರೇರಣಾದಾಯಿಯಾಗಿದೆ ಎಂದು ಕಾರ್ಯಕ್ರಮದಲ್ಲಿದ್ದ ಗಣ್ಯರು ಬಣ್ಣಿಸಿದರು.

    ಸಮಾರಂಭದಲ್ಲಿ ತಾಲೂಕಿನ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಭಾಗವಹಿಸಿ ಸಾಧಕರಿಗೆ ಶುಭಾಶಯ ಕೋರಿದರು.

    About The Author

    error: Content is protected !!