ಕುಶಾಲನಗರ (ಕೊಡಗು): ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ, ನಿಯಮ ಉಲ್ಲಂಘಿಸಿ ಶೇ. 90ರಷ್ಟು ಆಂಗ್ಲ ಭಾಷೆಯಲ್ಲಿ ನಾಮಫಲಕ ಅಳವಡಿಸಿದ್ದ ಮಳಿಗೆಯೊಂದಕ್ಕೆ ಕರವೇ ಪದಾಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದು, ಪುರಸಭೆ ಅಧಿಕಾರಿಗಳು ₹2,000 ದಂಡ ವಿಧಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ಇಲ್ಲಿನ ತಾವರೆಕೆರೆ ಪಕ್ಕದಲ್ಲಿರುವ ಕೆ.ಜಿ.ಎಸ್. ಸಾ-ಮಿಲ್ ಮಳಿಗೆಯ ‘ದಿ ನೆಸ್ಟ್ ವುಡ್ ಡೆಕೋರ್’ ಅಂಗಡಿಯ ನಾಮಫಲಕದಲ್ಲಿ ಕೇವಲ ಶೇ. 10ರಷ್ಟು ಮಾತ್ರ ಕನ್ನಡವಿದ್ದು, ಉಳಿದ ಶೇ. 90ರಷ್ಟು ಇಂಗ್ಲಿಷ್ ಅಕ್ಷರಗಳಿರುವುದು ಎಚ್. ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣವೇ ಸ್ಥಳಕ್ಕೆ ತೆರಳಿದ ಕಾರ್ಯಕರ್ತರು ಈ ಕುರಿತು ಅಂಗಡಿ ಮಾಲೀಕರಿಗೆ ತಿಳಿಹೇಳಲು ಮುಂದಾದಾಗ, ಮಾಲೀಕರು ಹಾಗೂ ಅವರ ಮಕ್ಕಳು ಪದಾಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.

ಪುರಸಭೆ ಅಧಿಕಾರಿಗಳ ಭೇಟಿ – ದಂಡ ಪ್ರಯೋಗ: ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕರವೇ ಪದಾಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧಿಕಾರಿಗಳಾದ ನಿಶಾ ರಾಘವನ್ ಮತ್ತು ಉದಯಕುಮಾರ್ ಪರಿಶೀಲನೆ ನಡೆಸಿ, ಸರ್ಕಾರದ ನಿಯಮ ಉಲ್ಲಂಘಿಸಿದ ಮಳಿಗೆ ಮಾಲೀಕರಿಗೆ ₹2,000 ದಂಡ ವಿಧಿಸಿದರು. ಅಲ್ಲದೆ, ಒಂದು ವಾರದೊಳಗೆ ಆಂಗ್ಲ ಭಾಷೆಯ ನಾಮಫಲಕವನ್ನು ತೆರವುಗೊಳಿಸಿ ನಿಯಮಾನುಸಾರ ಕನ್ನಡ ನಾಮಫಲಕ ಅಳವಡಿಸದಿದ್ದರೆ ಭಾರಿ ದಂಡ ವಿಧಿಸುವುದಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಮಹಿಳಾ ತಾಲೂಕು ಗೌರವಾಧ್ಯಕ್ಷೆ ಪುಟ್ಟಮ್ಮ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೆ. ಚಂದ್ರು, ಮಹಿಳಾ ತಾಲೂಕು ಜಂಟಿ ಕಾರ್ಯದರ್ಶಿ ಪ್ರೇಮ, ಜಿಲ್ಲಾ ಕಾರ್ಯದರ್ಶಿ ಸತೀಶ್, ಮುಖಂಡರಾದ ರಾಜೇಗೌಡ, ಕಾರ್ತಿಕ್, ರಮೇಶ್ ಆವರ್ತಿ ಹಾಗೂ ಸುಂದರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವರದಿ: ಪ್ರಿತುನ್ ಪೂವಣ್ಣ, ಕುಶಾಲನಗರ

More Stories
ಬಸ್ ತಂಗುದಾಣವೋ ಅಥವಾ ವಿಷಜಂತುಗಳ ಆವಾಸಸ್ಥಾನವೋ? ಕಾಡು ಪೊದೆ ತೆರವಿಗೆ ಕರವೇ ಸ್ವಾಭಿಮಾನಿ ಸೇನೆ ಆಗ್ರಹ
ಅಪಾಯದ ಹಂತದಲ್ಲಿರುವ ವಿದ್ಯುತ್ ಕಂಬ ಬದಲಾಯಿಸಲು ಕರವೇ ಆಗ್ರಹ
ಕುಶಾಲನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಕರವೇ ಭಾಗಿ, ಕಣ್ಣುಸೆಳೆದ ಭವ್ಯ ಮೆರವಣಿಗೆ