ಭಟ್ಕಳ: ರಾಷ್ಟ್ರೀಯ ಹೆದ್ದಾರಿ–66ರ ಮುರುಡೇಶ್ವರ ವ್ಯಾಪ್ತಿಯಲ್ಲಿ ಅತಿವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಮುರುಡೇಶ್ವರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ವೇಗ ಮಿತಿ ಉಲ್ಲಂಘಿಸಿದ 8 ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ತಲಾ ₹1,000 ದಂಡ ವಿಧಿಸಲಾಗಿದೆ.

ಬೈಲೂರು ಕ್ರಾಸ್ ಸಮೀಪ ಸ್ಪೀಡ್ ರಾಡಾರ್ ಗನ್ ಬಳಸಿ ನಡೆಸಿದ ತಪಾಸಣೆಯಲ್ಲಿ ನಿಗದಿತ ವೇಗ ಮಿತಿಯನ್ನು ಮೀರಿ, ಗಂಟೆಗೆ 100 ಕಿ.ಮೀ.ಗೂ ಅಧಿಕ ವೇಗದಲ್ಲಿ ಸಂಚರಿಸುತ್ತಿದ್ದ ಕಾರುಗಳನ್ನು ಪತ್ತೆ ಹಚ್ಚಲಾಯಿತು. ಬಳಿಕ ಚಾಲಕರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿ ಸ್ಥಳದಲ್ಲೇ ದಂಡ ವಸೂಲಿ ಮಾಡಲಾಯಿತು.
ಮುರುಡೇಶ್ವರ ಪೊಲೀಸ್ ಠಾಣೆಯ ಎಸ್‌ಐ ಹಣಮಂತ ಬಿರಾದಾರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಪೊಲೀಸರ ಎಚ್ಚರಿಕೆ
“ಮುರುಡೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಗೆ ಗಂಟೆಗೆ 80ರಿಂದ 90 ಕಿ.ಮೀ. ವೇಗ ಮಿತಿ ನಿಗದಿಪಡಿಸಲಾಗಿದೆ. ಈ ಮಿತಿಯನ್ನು ಮೀರಿ ಸಂಚರಿಸುವುದರಿಂದ ರಸ್ತೆ ಅಪಘಾತಗಳ ಸಂಭವ ಹೆಚ್ಚಾಗುವ ಹಿನ್ನೆಲೆಯಲ್ಲಿ ಸ್ಪೀಡ್ ರಾಡಾರ್ ಗನ್ ಮೂಲಕ ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದೆ.”
ಅತಿವೇಗವೇ ಅನೇಕ ಮಾರಣಾಂತಿಕ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿರುವುದರಿಂದ ವಾಹನ ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಗದಿತ ವೇಗ ಮಿತಿಯೊಳಗೆ ಸುರಕ್ಷಿತವಾಗಿ ವಾಹನ ಚಲಾಯಿಸಿ ಜೀವ ಹಾಗೂ ಜೀವನವನ್ನು ರಕ್ಷಿಸಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

More Stories
ಕಾರ್ಯಾಚರಣೆ ಸೂಪರ್ ಫಾಸ್ಟ್: 24 ಗಂಟೆಯಲ್ಲೇ ಸುಲಿಗೆ ಪ್ರಕರಣ ಭೇದಿಸಿದ ಮುರ್ಡೇಶ್ವರ ಪೊಲೀಸರು; ಓರ್ವನ ಬಂಧನ!
ಬೀನಾ ವೈದ್ಯ ಪಿಯು ಹಾಗೂ ಪದವಿ ಕಾಲೇಜಿನಲ್ಲಿ ಎನ್ಸಿಸಿ ರ್ಯಾಂಕಿಂಗ್ ಹಾಗೂ ಬ್ಯಾಡ್ಜ್ ಪ್ರದಾನ ಸಮಾರಂಭ
ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಜುಲೈ 25 ರಂದು ಜಪ್ತಿ ವಾಹನಗಳ ಸಾರ್ವಜನಿಕ ಹರಾಜು