ಭಟ್ಕಳ: ರಾಷ್ಟ್ರೀಯ ಹೆದ್ದಾರಿ-66ರ ದೊಡ್ಡ ಬಲಸೆ ಕ್ರಾಸ್ ಬಳಿ ನಡೆದಿದ್ದ ಚಿನ್ನದ ಸರ ಸುಲಿಗೆ ಪ್ರಕರಣವನ್ನು ಮುರ್ಡೇಶ್ವರ ಪೊಲೀಸರು ಕೇವಲ 24 ಗಂಟೆಗಳ ಅವಧಿಯಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ ₹3 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಸರ: ಸುಮಾರು 22 ಗ್ರಾಂ ತೂಕ. ವಾಹನ: ಕೃತ್ಯಕ್ಕೆ ಬಳಸಿದ್ದ ಬೈಕ್, ಮೊಬೈಲ್ ಫೋನ್
(ಒಟ್ಟು ಅಂದಾಜು ಮೌಲ್ಯ: ₹3,00,000)
ಜುಲೈ 20ರಂದು ರಾತ್ರಿ ದೊಡ್ಡ ಬಲಸೆ, ಬೈಲೂರು ನಿವಾಸಿ ಮಾದೇವ ನಾರಾಯಣ ನಾಯ್ಕ (56) ಅವರು ತಮ್ಮ ಕಿರಾಣಿ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸಿಸಿಟಿವಿ ಹಾಗೂ ತಾಂತ್ರಿಕ ಸುಳಿವಿನಿಂದ ಆರೋಪಿ ಸೆರೆ:
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್.ಎಂ., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಹಾಗೂ ಡಿವೈಎಸ್ಪಿ ಗಿರೀಶ ಬಿ. ಅವರ ಮಾರ್ಗದರ್ಶನದಲ್ಲಿ, ಸಿಪಿಐ ಜಗದೀಶ ಹಂಚಿನಾಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯ ಸುಳುವುಗಳ ಆಧಾರದ ಮೇಲೆ ಪಿಎಸ್ಐ ಹಣಮಂತ ಬಿರಾದಾರ ಮತ್ತು ಸಿಬ್ಬಂದಿಗಳ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಹಲ್ಲಂದಿ-ಕಟಗಾರಕೊಪ್ಪ ನಿವಾಸಿ ನಾಗರಾಜ ಗಣಪತಿ ಗೊಂಡ (29) ಎಂಬಾತನನ್ನು ಬಂಧಿಸಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೋರ್ವ ಆರೋಪಿಯ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಅತ್ಯಂತ ಕನಿಷ್ಠ ಅವಧಿಯಲ್ಲಿ ಪ್ರಕರಣ ಭೇದಿಸಿದ ವಿಶೇಷ ತನಿಖಾ ತಂಡದ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿಗಳು ಮೆಚ್ಚಿ ಅಭಿನಂದಿಸಿದ್ದಾರೆ.

ಸಿಬ್ಬಂದಿಗಳಾದ ಸುಬ್ರಹ್ಮಣ್ಯ ನಾಯ್ಕ, ಅರುಣ್ ಪಿಂಟೋ, ಮಂಜುನಾಥ ಲಕ್ಕಾಪುರ, ಬಿಲಾಲ್ ಅಹ್ಮದ್ ಸಿದ್ದಾಪೂರ, ವಿಜಯ ನಾಯ್ಕ, ಮಹೇಶ್ ಸಮನಳ್ಳಿ, ಸಿದ್ದಪ್ಪ ಕಾಂಬಳೆ ಹಾಗೂ ಸದಾಶಿವ ಕಟ್ಟಿಮನಿ ಇದ್ದರು.
About The Author


More Stories
ಮುರ್ಡೇಶ್ವರದಲ್ಲಿ ಭವ್ಯ ಬಿಲ್ವಾರ್ಚನೆ: 2 ಸಾವಿರಕ್ಕೂ ಅಧಿಕ ಭಕ್ತರು ಭಾಗಿ
ಭಟ್ಕಳದಲ್ಲಿ ಮನೆಯ ಶೆಡ್ನಿಂದ ಹೋಂಡಾ ಸ್ಕೂಟಿ ಕಳವು
ದೇಶಸೇವೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ: ಮುರ್ಡೇಶ್ವರ ಶಾಖೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ