August 23, 2026

ನಿಲ್ಲದ ಅಕ್ರಮ ಕಸ ವಿಲೇವಾರಿ: ಗ್ರಾಮಸ್ಥರ ಕೈಗೆ ಸಿಕ್ಕ ಕೋಳಿ ತ್ಯಾಜ್ಯ ವಾಹನ

ಭಟ್ಕಳ (ಮುರುಡೇಶ್ವರ):  ಮುರುಡೇಶ್ವರ ಸಮೀಪದ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ತಿಮಕ್ಕಿ–ಎಡಬಡ್ರು ರಸ್ತೆ ಬದಿಯ ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ಕಸ ಹಾಗೂ ಕೋಳಿ ತ್ಯಾಜ್ಯ ವಿಲೇವಾರಿ ಎಗ್ಗಿಲ್ಲದೆ ನಡೆಯುತ್ತಿದ್ದು, ಇದು ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮಾರ್ಗದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಜಾನುವಾರುಗಳು ನಿರಂತರವಾಗಿ ಸಂಚರಿಸುತ್ತಿದ್ದು, ಎಲ್ಲೆಂದರಲ್ಲಿ ಸುರಿಯುತ್ತಿರುವ ಕೋಳಿ ತ್ಯಾಜ್ಯದಿಂದ ವಿಪರೀತ ದುರ್ವಾಸನೆ ಹರಡಿದೆ. ಇದರಿಂದ ಪರಿಸರ ಮಾಲಿನ್ಯದ ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ಹಲವು ಬಾರಿ ಕಸ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವ ಪ್ರಯತ್ನ ಮಾಡಿದ್ದರೂ, ಅಕ್ರಮವಾಗಿ ತ್ಯಾಜ್ಯ ಸುರಿಯುವವರ ದುಷ್ಕೃತ್ಯ ಮಾತ್ರ ನಿಂತಿಲ್ಲ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದರೂ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಸ್ಥಳೀಯರ ಅಳಲು.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಾಹನ:

ಹಗಲು ಹೊತ್ತಲ್ಲೇ ಕೋಳಿ ತ್ಯಾಜ್ಯ ತುಂಬಿದ ವಾಹನವೊಂದು ಅರಣ್ಯ ಇಲಾಖೆಯ ಜಾಗದಲ್ಲಿ ಕಸ ಸುರಿಯಲು ಯತ್ನಿಸುತ್ತಿದ್ದ ವೇಳೆ, ಜಾಗರೂಕರಾಗಿದ್ದ ಗ್ರಾಮಸ್ಥರು ವಾಹನವನ್ನು ಅಡ್ಡಗಟ್ಟಿ ಹಿಡಿದಿದ್ದಾರೆ. ಬಳಿಕ ಸಂಬಂಧಪಟ್ಟವರನ್ನು ಅರಣ್ಯ ಇಲಾಖೆ ಹಾಗೂ ಬೈಲೂರು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಶಕ್ಕೆ ಒಪ್ಪಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಪ್ಪಿತಸ್ಥರಿಗೆ ದಂಡ ವಿಧಿಸಿ ವಸೂಲಿ ಮಾಡಿದ್ದಾರೆ.

ದಂಡವಷ್ಟೇ ಪರಿಹಾರವಲ್ಲ, ಕಠಿಣ ಕ್ರಮ ಬೇಕು:

“ಕೇವಲ ದಂಡ ವಿಧಿಸಿ ಕಳುಹಿಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ,” ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ವಿದ್ಯುತ್ ಕಂಬ ಹಾಗೂ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮವಾಗಿಲ್ಲ. ಇದರಿಂದಾಗಿ ರಾತ್ರಿ ವೇಳೆಯಲ್ಲಿ ಹಾಗೂ ಜನಸಂಚಾರ ಕಡಿಮೆ ಇರುವ ಸಮಯದಲ್ಲಿ ಅಕ್ರಮ ಕಸ ವಿಲೇವಾರಿ ನಿರಂತರವಾಗಿ ನಡೆಯುತ್ತಿದೆ,” ಎಂದು ದೂರಿದ್ದಾರೆ.
ಅಕ್ರಮ ಕಸ ವಿಲೇವಾರಿಗೆ ಶಾಶ್ವತ ಕಡಿವಾಣ ಹಾಕಲು ತಕ್ಷಣವೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು ಹಾಗೂ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಆಡಳಿತ ಮಂಡಳಿಗೆ ತುರ್ತು ಆಗ್ರಹಿಸಿದ್ದಾರೆ.

About The Author

error: Content is protected !!