August 24, 2026

ಹೊನ್ನಾವರ ರೋಟರಿ ಕ್ಲಬ್‌ನಿಂದ ಪತ್ರಿಕಾ ದಿನಾಚರಣೆ: ಪತ್ರಕರ್ತರಿಗೆ ಗೌರವ ಸನ್ಮಾನ

ಹೊನ್ನಾವರ:   ಸ್ಥಳೀಯ ರೋಟರಿ ಭವನದಲ್ಲಿ ಹೊನ್ನಾವರ ರೋಟರಿ ಕ್ಲಬ್ ವತಿಯಿಂದ ‘ಪತ್ರಿಕಾ ದಿನಾಚರಣೆ’ ಹಾಗೂ ತಾಲೂಕಿನ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ವಿನಾಯಕ ಮೇಸ್ತ ಅವರು, “ಹೊನ್ನಾವರ ರೋಟರಿ ಪರಿವಾರವು ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿದೆ. ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಪಿಂಕ್ ಆಟೋ ರಿಕ್ಷಾ, ಹೊಲಿಗೆ ಯಂತ್ರಗಳನ್ನು ವಿತರಿಸುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಬೆಂಬಲವಾಗಿ ನಿಂತಿದೆ. ನಿರಂತರವಾಗಿ ಪತ್ರಕರ್ತರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ. ರೋಟರಿಯ ಸಮಾಜಸೇವಾ ಕಾರ್ಯಗಳನ್ನು ಜನರಿಗೆ ತಲುಪಿಸಲು ಮಾಧ್ಯಮ ಕ್ಷೇತ್ರವು ಸದಾ ಸಹಕಾರ ನೀಡಲಿದೆ,” ಎಂದರು.

ಹಿರಿಯ ಪತ್ರಕರ್ತ ಜಿ. ಯು. ಭಟ್ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ಮಾಧ್ಯಮ ಕ್ಷೇತ್ರವು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದರೂ, ಯುವ ಪತ್ರಕರ್ತರು ಧೈರ್ಯದಿಂದ ಈ ಕ್ಷೇತ್ರಕ್ಕೆ ಬಂದು ಉತ್ತಮ ಕೆಲಸ ಮಾಡುತ್ತಿರುವುದು ಭರವಸೆಯ ಬೆಳಕಾಗಿದೆ. ರೋಟರಿ ಸಂಸ್ಥೆಯ ಸಮಾಜಮುಖಿ ಸೇವಾ ಕಾರ್ಯಗಳು ಹೀಗೆಯೇ ಯಶಸ್ವಿಯಾಗಿ ಮುಂದುವರಿಯಲಿ,” ಎಂದು ಶುಭ ಹಾರೈಸಿದರು.

ಪತ್ರಕರ್ತರಿಗೆ ಗೌರವ ಸನ್ಮಾನ:

ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಜಿ. ಯು. ಭಟ್, ಕೃಷ್ಣಮೂರ್ತಿ ಹೆಬ್ಬಾರ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ವಿನಾಯಕ ಮೇಸ್ತ, ಜಿಲ್ಲಾ ಉಪಾಧ್ಯಕ್ಷ ಎಚ್. ಎಮ್. ಮಾರುತಿ, ಸದಸ್ಯ ಸತೀಶ ತಾಂಡೇಲ, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಕಾರ್ಯದರ್ಶಿ ಪ್ರಸಾದ ಹೆಗಡೆ, ಖಜಾಂಚಿ ವಿವೇಕ ಶೇಟ್ ಹಾಗೂ ಸದಸ್ಯರಾದ ಮುರಳೀಧರ ಗಾಯ್ತೊಂಡೆ, ಎಚ್. ಎಲ್. ನಗರೆ, ಶ್ರೀಧರ ನಾಯ್ಕ, ವಿಶ್ವನಾಥ ಸಾಲ್ಕೋಡ ಅವರನ್ನು ರೋಟರಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು.


ರೋಟರಿಯನ್ ನಾರಾಯಣ ಯಾಜಿ ಸಾಲೇಬೈಲು ಅವರು ಅಭಿನಂದನಾ ನುಡಿಗಳನ್ನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಹೆನ್ರಿ ಲೀಮಾ ಅವರು ಸಭೆಯನ್ನು ಸ್ವಾಗತಿಸಿದರೆ, ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಖಜಾಂಚಿ ಸೋಹನ್ ಹೊರ್ಟಾ, ಇವೆಂಟ್ ಚೇರ್ಮನ್ ಸತೀಶ ನಾಯ್ಕ ಹಾಗೂ ರೋಟರಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ದಿನೇಶ ಕಾಮತ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

About The Author

error: Content is protected !!