

ಹೊನ್ನಾವರ: ಯಕ್ಷರಂಗದ ಅಪ್ರತಿಮ ‘ಹಾಸ್ಯ ಚಕ್ರವರ್ತಿ’ ಎಂದೇ ಜನಮನ್ನಣೆ ಪಡೆದಿದ್ದ ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಧರ ಭಟ್ ಕಾಸರಕೋಡು (52) ಅವರು ಶುಕ್ರವಾರ ನಿಧನರಾಗಿದ್ದಾರೆ.


ಮೂರುವರೆ ದಶಕಗಳಿಗೂ ಹೆಚ್ಚು ಕಾಲ ಯಕ್ಷರಂಗದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ್ದ ಶ್ರೀಧರ ಭಟ್ ಅವರು ತಮ್ಮ ಸಹಜ ಅಭಿನಯ, ಸಮಯಪ್ರಜ್ಞೆ, ತಾಳ್ಮೆ ಹಾಗೂ ಪ್ರೇಕ್ಷಕರೊಂದಿಗೆ ಬೆಸೆದುಕೊಳ್ಳುತ್ತಿದ್ದ ರೀತಿಯಿಂದ ಪ್ರೇಕ್ಷಕರ ಮನಸೋಲಿಸಿದ್ದರು. ಜೋಕಮಾರ ಸ್ವಾಮಿ, ಕುಜ್ಜಿ, ಸೂತ್ರಧಾರಿ ಸೇರಿದಂತೆ ನೂರಾರು ಹಾಸ್ಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಸಾವಿರಾರು ಕಲಾಪ್ರೇಮಿಗಳನ್ನು ನಗಿಸಿ ಸೈ ಎನಿಸಿಕೊಂಡಿದ್ದರು.
ಅವರು ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ ಹಾಗೂ ಜಲವಳ್ಳಿ ಸೇರಿದಂತೆ ಕರಾವಳಿಯ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಪ್ರಮುಖ ಹಾಸ್ಯ ಕಲಾವಿದರಾಗಿ ಸೇವೆ ಸಲ್ಲಿಸಿ ಕಲಾರಸಿಕರ ಪ್ರೀತಿಗೆ ಪಾತ್ರರಾಗಿದ್ದರು.
ಮೂಲತಃ ಹೊನ್ನಾವರದ ಕಾಸರಕೋಡಿನವರಾದ ಇವರು, ಪ್ರಸ್ತುತ ಸಾಲ್ಕೋಡು ಗ್ರಾಮದ ಮುಲ್ಲೆಮಕ್ಕಿಯಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ಅಗಲಿದ್ದಾರೆ.

ಕಲಾ ಲೋಕದ ಸಂತಾಪ:
ಶ್ರೀಧರ ಭಟ್ ಕಾಸರಕೋಡು ಅವರ ದಿಢೀರ್ ಅಗಲಿಕೆಗೆ ಯಕ್ಷಗಾನ ಕ್ಷೇತ್ರ ಕಂಬನಿ ಮಿಡಿದಿದೆ. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ವಿದ್ಯಾದರ ಜಲವಳ್ಳಿ, ಶಿವಾನಂದ ಹೆಗಡೆ ಕೆರೆಮನೆ, ಶಂಕರ ಹೆಗಡೆ ನಿಲ್ಕೋಡ್ ಹಾಗೂ ಕಲಾ ಪೋಷಕರಾದ ಶಿವಾನಂದ ಹೆಗಡೆ ಕಡತೋಕಾ, ರಾಜು ಭಂಡಾರಿ, ನಾಗರಾಜ ಹೆಗಡೆ ಖಾಸ್ಕಂಡ ಸೇರಿದಂತೆ ಹಲವು ಗಣ್ಯರು, ಕಲಾವಿದರು ಹಾಗೂ ಕಲಾಪ್ರೇಮಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.