August 24, 2026

ಮನೆ ಬಾಡಿಗೆ ವಿವಾದ: ಮಾವ–ಅಳಿಯ ನಡುವೆ ಮಾರಾಮಾರಿ! ಭಟ್ಕಳದಲ್ಲಿ ಪರಸ್ಪರ ದೂರು, ಇಬ್ಬರ ವಿರುದ್ಧ ಕೇಸ್

ಭಟ್ಕಳ:  ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಾವ ಹಾಗೂ ಅಳಿಯನ ನಡುವೆ ನಡೆದ ಗಂಭೀರ ವಾಗ್ವಾದ ರಕ್ತಪಾತದಲ್ಲಿ ಅಂತ್ಯಗೊಂಡಿದ್ದು, ಪರಸ್ಪರ ಹಲ್ಲೆ ನಡೆಸಿದ ಆರೋಪದ ಮೇಲೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪ್ರಕರಣ 1: ಮಾವನಿಂದ ಅಳಿಯನ ಮೇಲೆ ಹಲ್ಲೆ ಆರೋಪ

ಆಜಾದ್ ನಗರದ ಶೇಡುಕುಳಿ ಹೊಂಡ ನಿವಾಸಿ ಅಮೀರ್ ಶೇಖ್ ಎಂಬುವವರು ಮನೆ ಬಾಡಿಗೆ ವಿಚಾರವಾಗಿ ಅಳಿಯ ಮಹಮ್ಮದ್ ಅಫಾನ್ ಇಸ್ಮಾಯಿಲ್ ಶೇಖ್ (34) ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಟೈಲ್ಸ್ ತುಂಡಿನಿಂದ ಅಳಿಯನ ತಲೆಗೆ ಹೊಡೆದು ಗಾಯಗೊಳಿಸಿ, ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಅಫಾನ್ ಅವರನ್ನು ಸ್ಥಳೀಯರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮಹಮ್ಮದ್ ಅಫೀಫ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣ 2: ಅಳಿಯನಿಂದ ಮಾವನ ಮೇಲೂ ಹಲ್ಲೆ ದೂರು

ಇದೇ ಘಟನೆಗೆ ಸಂಬಂಧಿಸಿದಂತೆ ಮೂಸಾನಗರ ನಿವಾಸಿ, ಮಾವ ಅಮೀರ್ ಶೇಖ್ (61) ಅವರು ಅಳಿಯ ಅಫಾನ್ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ. ಅಫಾನ್ ಕಳೆದ ಏಳು ತಿಂಗಳಿಂದ ಮಾವನ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದು, ಬಾಡಿಗೆ ಹಣ ಪಾವತಿಸದ ವಿಚಾರವಾಗಿ ಈಗಾಗಲೇ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ದೂರಿನ ಪ್ರಕಾರ, ತಾನು ಮನೆಯಲ್ಲಿ ಇಲ್ಲದ ವೇಳೆ ಅಫಾನ್ ಬಂದು ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದನ್ನು ಪ್ರಶ್ನಿಸಿದ್ದಕ್ಕೆ, ಆತ ಕಲ್ಲಿನಿಂದ ಮಾವನ ತಲೆ ಹಾಗೂ ದೇಹಕ್ಕೆ ಹೊಡೆದು ಗಾಯಗೊಳಿಸಿದ್ದಾನೆ. ಅಲ್ಲದೆ ಗೇಟ್‌ಗೆ ಕಾಲಿನಿಂದ ಒದ್ದು, ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಮಾವ ಮತ್ತು ಅಳಿಯ ಇಬ್ಬರೂ ನೀಡಿರುವ ದೂರುಗಳನ್ನು ಆಧರಿಸಿ ಭಟ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!