ಹೊನ್ನಾವರ: ತಾಲೂಕಿನ ಮಾಳ್ಕೋಡ-ಕೆಳಗಿನ ಇಡಗುಂಜಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೂರದ ಊರುಗಳ ವಿದ್ಯಾರ್ಥಿಗಳಿಗೆ ಕೊನೆಗೂ ವಾಹನ (ಸಾರಿಗೆ) ವ್ಯವಸ್ಥೆ ಕಲ್ಪಿಸಲಾಗಿದೆ. ಪಾಲಕರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಜಂಟಿ ಸಹಯೋಗದೊಂದಿಗೆ ಈ ವಾಹನ ಸೇವೆಗೆ ಅಧಿಕೃತವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ದೂರದ ಬಾಳುಬೆಲೆ, ಕೆಳಗಿನ ಇಡಗುಂಜಿ ಹಾಗೂ ಮಾಳ್ಕೋಡ ಭಾಗಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆಯಿಂದಾಗಿ ಬೇರೆ ಶಾಲೆಗಳಿಗೆ ತೆರಳುವುದನ್ನು ತಪ್ಪಿಸಲು ಮತ್ತು ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಕಾಯ್ದುಕೊಳ್ಳಲು ಪಾಲಕರೆಲ್ಲರೂ ಒಂದಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಮಕ್ಕಳ ಬಹುದಿನದ ಕನಸು ನನಸಾಗಿದ್ದು, ವಾಹನದಲ್ಲಿ ಶಾಲೆಗೆ ಆಗಮಿಸುವ ಮೂಲಕ ಮಕ್ಕಳು ಸಂಭ್ರಮಿಸಿದರು.

“ಶತಮಾನೋತ್ತರ ಸಂಭ್ರಮದಲ್ಲಿರುವ ನಮ್ಮ ಶಾಲೆಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ದೂರದ ಪ್ರದೇಶದಿಂದ ಬರುವ ಮಕ್ಕಳಿಗೆ ತೊಂದರೆಯಾಗದಂತೆ ಪಾಲಕರೇ ವಾಹನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ನಮ್ಮ ಊರಿನ ಮಕ್ಕಳು ಬೇರೆಡೆಗೆ ಹೋಗುವುದು ತಪ್ಪಿದೆ. ಇದರ ನಿರ್ವಹಣೆಗೆ ಬೇಕಾಗುವ ಆರ್ಥಿಕ ನೆರವನ್ನು ದಾನಿಗಳಿಂದ ಹಾಗೂ ಹಳೇ ವಿದ್ಯಾರ್ಥಿಗಳಿಂದ ಪೂರೈಸಲು ಕ್ರಮ ವಹಿಸಲಾಗುವುದು.”
– ನಾಗರಾಜ ನಾಯ್ಕ ಮಾಳ್ಕೋಡ, ಅಧ್ಯಕ್ಷರು, ಶತಮಾನೋತ್ಸವ ಸಮಿತಿ
“ನಮ್ಮ ಶಾಲೆಯಲ್ಲಿ ಈಗಾಗಲೇ ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್ ತರಬೇತಿಗಳನ್ನು ಆರಂಭಿಸಲಾಗಿದೆ. ದೂರದ ವಿದ್ಯಾರ್ಥಿಗಳ ಸಾರಿಗೆ ಅನುಕೂಲಕ್ಕಾಗಿ ಪಾಲಕರು ಮಾಡಿರುವ ಈ ವಾಹನ ವ್ಯವಸ್ಥೆಗೆ SDMC ಯ ಸಂಪೂರ್ಣ ಸಹಕಾರ ಹಾಗೂ ಬೆಂಬಲವಿದೆ.”
– ರಾಜೇಶ ಎಂ. ಶೆಟ್ಟಿ, ಅಧ್ಯಕ್ಷರು, SDMC

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ ಬಿಳಿಯಾ ನಾಯ್ಕ, ನಿಕಟಪೂರ್ವ ಉಪಾಧ್ಯಕ್ಷ ಗೋಪಾಲ ಜೆ ನಾಯ್ಕ, ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷರಾದ ಶಂಕರ ಗಣಪತಿ ನಾಯ್ಕ, ಜಿ.ಕೆ. ಹೆಗಡೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ ಎಚ್. ನಾಯ್ಕ, SDMC ಉಪಾಧ್ಯಕ್ಷೆ ಭಾರತಿ ನಾಗರಾಜ ನಾಯ್ಕ ಹಾಗೂ ಮುಖ್ಯಾಧ್ಯಾಪಕಿ ಲಕ್ಷ್ಮೀ ಎನ್. ಭಟ್ಟ ಉಪಸ್ಥಿತರಿದ್ದರು.
ಸಮಿತಿಯ ಪದಾಧಿಕಾರಿಗಳಾದ ಮಂಜುನಾಥ ಕೃಷ್ಣ ನಾಯ್ಕ, ಮಂಜುನಾಥ ಶಂಕರ ನಾಯ್ಕ, ವೆಂಕಟ್ರಮಣ ಜಿ. ನಾಯ್ಕ, ಕಮಲಾಕರ್ ಎನ್. ನಾಯ್ಕ, ಕೇಶವ ಈರಾ ಅಂಬಿಗ, ಗಣೇಶ ಎಸ್. ನಾಯ್ಕ, ವೀಣಾ ಪಿ. ನಾಯ್ಕ, ಶರಾವತಿ ಗೌಡ, ಲಕ್ಷ್ಮೀ ನಾಯ್ಕ, ಶಿಕ್ಷಕರಾದ ವಿಜಿ ಭಟ್ಟ, ಭಾಸ್ಕರ ನಾಯ್ಕ, ವನಿತಾ ಹೆಗಡೆ ಹಾಗೂ ಅನೇಕ ಪೋಷಕರು ಭಾಗವಹಿಸಿದ್ದರು.

More Stories
ಹೊನ್ನಾವರದ ಎನ್. ಎಂ. ಗುರುಪ್ರಸಾದ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪ್ರದಾನ
ಅನಿಲಗೋಡ್ ಕಾಲುಸೇತುವೆ ಕುಸಿದು 2 ವರ್ಷ ಕಳೆದರೂ ಮರುನಿರ್ಮಾಣವಿಲ್ಲ: ನೂರಾರು ಗ್ರಾಮಸ್ಥರ ಸಂಕಷ್ಟ
ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಐದು ವಿದ್ಯಾರ್ಥಿಗಳು ಎನ್.ಎಮ್.ಎಮ್.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣ