

ಹೊನ್ನಾವರ: “ಉತ್ತರ ಕನ್ನಡ ಜಿಲ್ಲೆಗೆ ನನ್ನನ್ನು ಖಾಯಂ ಉಸ್ತುವಾರಿ ಸಚಿವರನ್ನಾಗಿ ನೇಮಿಸಿಲ್ಲ. ಕೇವಲ ಮುಖ್ಯಮಂತ್ರಿಗಳ ಸೂಚನೆಯಂತೆ ಬರ ಹಾಗೂ ನೆರೆ ಹಾನಿ ವೀಕ್ಷಣೆಗೆ ಭೇಟಿ ನೀಡಿದ್ದೇನೆ. ಜಿಲ್ಲೆಗೆ ಪರ್ಮಿನೆಂಟ್ ಉಸ್ತುವಾರಿ ನೇಮಕವಾದ ಬಳಿಕ ಇಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸುವೆ” ಎಂದು ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

ಹೊನ್ನಾವರ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕಾರಿಗಳ ಸಮಾಲೋಚನಾ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಬರ ಹಾಗೂ ಅತಿವೃಷ್ಟಿ ಪರಿಶೀಲನೆ:
ಸಭೆಯಲ್ಲಿ ಸಚಿವರು ಮಾತನಾಡಿ, “ಮಳೆಯಿಂದ ಹಾನಿಯಾದ ರಸ್ತೆ, ಸೇತುವೆಗಳ ದುರಸ್ತಿ ಹಾಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ತ್ವರಿತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು” ಎಂದರು. ಶಾಲೆಗಳ ದುಸ್ಥಿತಿ ಹಾಗೂ ಅನುದಾನದ ಕುರಿತು ಸಂಬಂಧಿಸಿದ ಸಚಿವರ ಬಳಿ ಚರ್ಚಿಸಿ ಪರಿಹರಿಸುವ ಭರವಸೆ ನೀಡಿದರು. ಆದರೆ ಶರಾವತಿ ಪಂಪ್ಡ್ ಸ್ಟೋರೇಜ್ ಹಾಗೂ ಟೊಂಕಾ ವಾಣಿಜ್ಯ ಬಂದರು ವಿಷಯಗಳ ಕುರಿತು ಉತ್ತರಿಸಲು ನಿರಾಕರಿಸಿದ ಅವರು, ಖಾಯಂ ಉಸ್ತುವಾರಿ ನೇಮಕದ ಬಳಿಕ ಪ್ರತಿಕ್ರಿಯಿಸುವುದಾಗಿ ಹೇಳಿದರು.

ವೈದ್ಯಾಧಿಕಾರಿಗೆ ಕಡಕ್ ಬುದ್ಧಿವಾದ ಹೇಳಿದ ಸಚಿವರು:
ಸಭೆಯಲ್ಲಿ ಹೊನ್ನಾವರ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ್ ಕಿಣಿ ಮಾತನಾಡಿ, “ಕುಡಿದು ಬರುವ ಕೆಲವರು ಆಸ್ಪತ್ರೆಯಲ್ಲಿ ದಾಂದಲೆ ಮಾಡುತ್ತಾರೆ. ಪೊಲೀಸರಿಗೆ ತಿಳಿಸಿದರೂ ಗಲಾಟೆ ಮುಗಿದ ಮೇಲೆ ಬರುತ್ತಾರೆ. ಆದ್ದರಿಂದ ಆಸ್ಪತ್ರೆಗೆ ಪ್ರತ್ಯೇಕ ಪೊಲೀಸ್ ಸಿಬ್ಬಂದಿ ಭದ್ರತೆ ನೀಡಬೇಕು” ಎಂದು ಮನವಿ ಮಾಡಿದರು.


ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಚಿವ ಲಕ್ಷ್ಮಣ ಸವದಿ, “ನೀವು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದಿದ್ದಾಗ ಮಾತ್ರ ಅವರ ಸಂಬಂಧಿಕರು ಗಲಾಟೆ ಮಾಡುತ್ತಾರೆ. ಮೊದಲು ನೀವು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ, ನಿಮ್ಮ ರಕ್ಷಣೆಗೆ ಪೊಲೀಸರು ಖಂಡಿತ ಇರಲಿದ್ದಾರೆ” ಎಂದು ಕಡಕ್ ಆಗಿ ಬುದ್ಧಿವಾದ ಹೇಳಿದರು. ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಹಾಗೂ ಮೂಲಸೌಕರ್ಯ ಕೇಳುವ ಬದಲು ಭದ್ರತೆ ಕೇಳಿದ ವೈದ್ಯಾಧಿಕಾರಿಯ ನಡೆಗೆ ಸಾರ್ವಜನಿಕ ವಲಯದಲ್ಲೂ ಆಕ್ಷೇಪ ವ್ಯಕ್ತವಾಯಿತು.
ರಸ್ತೆ ಸರಿಪಡಿಸಲು 1 ಕೋಟಿ ಅನುದಾನದ ಬೇಡಿಕೆ ಇಟ್ಟ ಶಾಸಕ ದಿನಕರ ಶೆಟ್ಟಿ:
ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ, “ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಮೇವಿನ ಅಭಾವ ಸದ್ಯಕ್ಕಿಲ್ಲ. ಆದರೆ ಮಳೆಯಿಂದ ರಸ್ತೆ ಹಾಗೂ ಸೇತುವೆಗಳು ತೀವ್ರ ಹಾನಿಗೊಳಗಾಗಿವೆ. ಹೊನ್ನಾವರ ಪಟ್ಟಣ ಹಾಗೂ ಪ್ರಭಾತ ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಪಟ್ಟಣ ಪಂಚಾಯತಿಯಲ್ಲಿ ಹಣದ ಅಭಾವವಿದೆ” ಎಂದು ಸಚಿವರ ಗಮನಕ್ಕೆ ತಂದರು.
ಈಗಾಗಲೇ ಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ 1 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಇನ್ನು ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿದರು. ಅಲ್ಲದೆ, ನಾಲ್ಕು ಪಟ್ಟಣ ಪಂಚಾಯತಿಗಳಿಗೆ ಒಬ್ಬರೇ ಇಂಜಿನಿಯರ್ ಇರುವುದರಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಹೆಚ್ಚುವರಿ ಇಂಜಿನಿಯರ್ ನಿಯೋಜಿಸುವಂತೆ ಮನವಿ ಮಾಡಿದರು. ಸಚಿವರು ಈ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಭೆಯಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ, ದಿನಕರ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಭೀಮಣ್ಣ ನಾಯ್ಕ, ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್, ಜಗದೀಪ ತೆಂಗೇರಿ ಸೇರಿದಂತೆ ಹಲವು ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.