

ಮುರ್ಡೇಶ್ವರ ನಾಕಾ ಬಳಿ ಮಧ್ಯರಾತ್ರಿ ಭೀಕರ ಘಟನೆ

ಚಾಕುವಿನಿಂದ ಇರಿದು ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು

ಭಟ್ಕಳ: ಮಧ್ಯರಾತ್ರಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಿ, ಸಾರ್ವಜನಿಕರ ರಕ್ಷಣೆಗೆ ತೆರಳಿದ್ದ ಮುರ್ಡೇಶ್ವರ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ಮೇಲೆ ಆರೋಪಿಗಳ ಗುಂಪೊಂದು ಚಾಕುವಿನಿಂದ ದಾಳಿ ನಡೆಸಿ, ಹಲ್ಲೆ ಮಾಡಿರುವ ಭೀಕರ ಘಟನೆ ಆ.9ರಂದು ಮಧ್ಯರಾತ್ರಿ ಮುರ್ಡೇಶ್ವರ ನಾಕಾ ಸಮೀಪ ಸಂಭವಿಸಿದೆ.

ದಾಳಿಯಲ್ಲಿ ಮುರ್ಡೇಶ್ವರ ಠಾಣೆಯ ಕಾನ್ಸ್ಟೆಬಲ್ಗಳಾದ ವಿನಾಯಕ ಚಂದ್ರಹಾಸ ಶೆಟ್ಟಿ (36) ಹಾಗೂ ಸಂಗಪ್ಪ ಹರಿಜನ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳು ಸಿಬ್ಬಂದಿಗೆ ಸ್ಥಳೀಯ ಆರ್ಎನ್ಎಸ್ (RNS) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.



ಘಟನೆಯ ವಿವರ: ರಾತ್ರಿ ಗಸ್ತು (ನೈಟ್ ಬೀಟ್) ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಂಗಪ್ಪ ಹರಿಜನ ಅವರಿಗೆ ಮುರ್ಡೇಶ್ವರ ನಾಕಾ ಬಳಿ ಗಲಾಟೆ ನಡೆಯುತ್ತಿರುವ ಕುರಿತು ದೂರವಾಣಿ ಕರೆ ಬಂದಿತ್ತು. ತಕ್ಷಣವೇ ಅವರು ಮತ್ತೊಬ್ಬ ಸಿಬ್ಬಂದಿ ವಿನಾಯಕ ಶೆಟ್ಟಿ ಅವರೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಹೊನ್ನಾವರ ಕಡೆಗೆ ಸಾಗುವ ಸರ್ವೀಸ್ ರಸ್ತೆಯ ಪ್ರಜಾ ಜ್ಯೂಸ್ ಸೆಂಟರ್ ಎದುರು ಆರೋಪಿಗಳು ಕೈಯಲ್ಲಿ ಚಾಕು ಹಿಡಿದು ಗುಂಪು ಕಟ್ಟಿಕೊಂಡು ಮನೋಜ ನಾಯ್ಕ ಎಂಬಾತನ ಮೇಲೆ ಹಲ್ಲೆಗೆ ಮುಂದಾಗಿದ್ದರು.

ಇದನ್ನು ಕಂಡು ತಡೆಯಲು ಹೋದ ಪೊಲೀಸರ ಮೇಲೆಯೇ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ಹೃತಿಕ ಮಾದೇವ ನಾಯ್ಕ ಚಾಕುವಿನಿಂದ ವಿನಾಯಕ ಶೆಟ್ಟಿ ಅವರ ಎಡಗೈ ಅಂಗೈಗೆ ಇರಿದಿದ್ದರೆ, ರಾಜು ಮಾದೇವ ನಾಯ್ಕ ಎಂಬಾತ ಸಂಗಪ್ಪ ಹರಿಜನ ಅವರ ಬಲಗೈಗೆ ಇರಿದು ಗಾಯಗೊಳಿಸಿದ್ದಾನೆ.
ಕಾರ್ನಲ್ಲಿ ಪರಾರಿಯಾದ ಆರೋಪಿಗಳು: ಪೊಲೀಸ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳು, “ಮತ್ತೆ ನಮ್ಮ ತಂಟೆಗೆ ಬಂದರೆ ಜೀವಂತವಾಗಿ ಬಿಡುವುದಿಲ್ಲ” ಎಂದು ಜೀವಬೆದರಿಕೆ ಹಾಕಿ, ಸ್ಥಳದಲ್ಲಿದ್ದ ಕಾರು ಹಾಗೂ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ರಾಜು ಮಾದೇವ ನಾಯ್ಕ, ಹೃತಿಕ ಮಾದೇವ ನಾಯ್ಕ, ಮದನ ನಾಯ್ಕ, ಯೋಗೇಶ ನಾಯ್ಕ, ದರ್ಶನ ಹಾಗೂ ಇತರರ ವಿರುದ್ಧ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಮಾರಕಾಸ್ತ್ರಗಳಿಂದ ಹಲ್ಲೆ ಹಾಗೂ ಜೀವ ಬೆದರಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ