

ಫಲಪಂಚಾಮೃತ ಅಭಿಷೇಕದೊಂದಿಗೆ ಸಮುದ್ರರಾಜನಿಗೆ ನಮನ ಸಲ್ಲಿಸಿದ ಪರ್ಷಿಯನ್ ಬೋಟ್ ಮಾಲೀಕರು

ಬೋಟ್ಗಳ ಸುರಕ್ಷತೆ ಹಾಗೂ ಸಮೃದ್ಧ ಮೀನುಗಾರಿಕೆಗೆ ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆದ ಸಂಘ

ಭಟ್ಕಳ: ಎರಡು ತಿಂಗಳ ಕಾಲಾವಧಿಯ ಮೀನುಗಾರಿಕಾ ನಿಷೇಧ ಹಾಗೂ ವಿರಾಮದ ಬಳಿಕ ಸಮುದ್ರಕ್ಕಿಳಿದು ಕಡಲ ಕಾಯಕ ಪುನರಾರಂಭಿಸಲು ಭಟ್ಕಳದ ಪರ್ಷಿಯನ್ ಬೋಟ್ ಮಾಲೀಕರು ಮತ್ತು ಮೀನುಗಾರರು ಸಜ್ಜಾಗಿದ್ದಾರೆ. ನೂತನ ಮೀನುಗಾರಿಕಾ ಋತು ಸುಗಮವಾಗಿ ಸಾಗಲಿ, ಕಡಲಿನಲ್ಲಿ ಬೋಟ್ಗಳು ಸುರಕ್ಷಿತವಾಗಿ ಸಂಚರಿಸಲಿ ಹಾಗೂ ಉತ್ತಮ ಪ್ರಮಾಣದಲ್ಲಿ ಮೀನುಗಾರಿಕೆ ಲಭಿಸಲಿ ಎಂಬ ಆಶಯದೊಂದಿಗೆ ಬಂದರಿನಲ್ಲಿ ಭಕ್ತಿಭಾವದಿಂದ ಸಮುದ್ರ ಪೂಜೆ ನೆರವೇರಿಸಲಾಯಿತು.

ಭಟ್ಕಳ ಬಂದರು ಪ್ರದೇಶದ ಸಮುದ್ರ ದಂಡೆಯಲ್ಲಿ ಪರ್ಷಿಯನ್ ಬೋಟ್ ಸಂಘದ ವತಿಯಿಂದ ಈ ಸಾಂಪ್ರದಾಯಿಕ ಧಾರ್ಮಿಕ ಆಚರಣೆ ನಡೆಯಿತು.


ವಿಶೇಷ ಫಲಪಂಚಾಮೃತ ಅಭಿಷೇಕ ಹಾಗೂ ರುದ್ರ ಪಠಣ: ಬಂದರಿನ ಕುಟುಮೇಶ್ವರ ದೇವಸ್ಥಾನದ ಪುರೋಹಿತ ಮಂಜುನಾಥ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಸಮುದ್ರದಂಡೆಯ ಮರಳಿನಲ್ಲಿ ಕಲಶ ಪ್ರತಿಷ್ಠಾಪಿಸಿ, ರುದ್ರ ಪಠಣದೊಂದಿಗೆ ಸಮುದ್ರರಾಜ ಹಾಗೂ ಪರಮೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಪರ್ಷಿಯನ್ ಬೋಟ್ ಸಂಘದ ಅಧ್ಯಕ್ಷ ಭಾಸ್ಕರ್ ದುರ್ಗಯ್ಯ ಖಾರ್ವಿ ಅವರು ಪೂಜಾ ಸಂಕಲ್ಪ ವಹಿಸಿದ್ದು, ಸಮುದ್ರರಾಜನಿಗೆ ಎಳನೀರು, ಹಾಲು, ಹಣ್ಣು, ಸಕ್ಕರೆ ಹಾಗೂ ಖರ್ಜೂರದಿಂದ ತಯಾರಿಸಿದ ಫಲಪಂಚಾಮೃತದಿಂದ ಮಹಾಅಭಿಷೇಕ ಮಾಡಿ ನೈವೇದ್ಯ ಅರ್ಪಿಸಲಾಯಿತು. ಸಮುದ್ರವನ್ನೇ ನಂಬಿ ಬದುಕುವ ಸಾವಿರಾರು ಕುಟುಂಬಗಳ ಜೀವನಾಧಾರವಾದ ಈ ಕಾಯಕಕ್ಕೆ ಹೊರಡುವ ಮುನ್ನ ಪೂಜೆ ಸಲ್ಲಿಸುವುದು ಇಲ್ಲಿನ ವರ್ಷಗಳ ಪರಂಪರೆಯಾಗಿದೆ.
ಶೃಂಗೇರಿ ಜಗದ್ಗುರುಗಳ ಆಶೀರ್ವಾದ: ಮೀನುಗಾರಿಕೆ ಚಟುವಟಿಕೆಗಳನ್ನು ಆರಂಭಿಸುವ ಮುನ್ನ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ಹಾಗೂ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಈ ಪೂಜಾ ಕಾರ್ಯಕ್ರಮದಲ್ಲಿ ಪರ್ಷಿಯನ್ ಬೋಟ್ ಸಂಘದ ಉಪಾಧ್ಯಕ್ಷ ಪದ್ಮಯ್ಯ ಮೊಗೇರ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಕೊಡೇರಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಮೀನುಗಾರ ಮುಖಂಡರು ಹಾಗೂ ಎಲ್ಲಾ ಪರ್ಷಿಯನ್ ಬೋಟ್ ಮಾಲೀಕರು ಮತ್ತು ಕಾರ್ಮಿಕರು ಭಾಗವಹಿಸಿದ್ದರು.
About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ