

ಹೊನ್ನಾವರ/ಗುಣವಂತೆ: ಸ್ವಾತಂತ್ರ್ಯೋತ್ಸವದ ಆಚರಣೆಯ ಅಂಗವಾಗಿ ‘ಸಮರ್ಪಣಾ ವೇದಿಕೆ’ಯ ವತಿಯಿಂದ ಗುಣವಂತೆಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಳಗಿನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಶ್ರೀ ತಿಮ್ಮಪ್ಪ ಗೌಡ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಯಕ್ಷಸಿರಿ’ ಪ್ರಶಸ್ತಿ ಪುರಸ್ಕೃತ ಶ್ರೀರಾಮ ಗೌಡ ಅವರನ್ನು ಘನತೆಯಿಂದ ಸನ್ಮಾನಿಸಿ ಗೌರವಿಸಲಾಯಿತು.

ದೇಶ ರಕ್ಷಿಸುವ ಯೋಧರನ್ನು ಸ್ಮರಿಸುವುದು ನಮ್ಮ ಕರ್ತವ್ಯ:
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನಸುತ ಶ್ರೀ ಶಂಭು ಹೆಗಡೆ ಅವರು,“ಬಾಹ್ಯವಾಗಿ ನಮ್ಮ ದೇಶಕ್ಕೆ ಆತಂಕ ತರುವ ಶಕ್ತಿಗಳಿಂದ ರಕ್ಷಿಸುವ ಯೋಧರನ್ನು ಕಾಲಕಾಲಕ್ಕೆ ಸಂಘಟನೆಗಳು ಸ್ಮರಿಸಿ, ಗೌರವಿಸುವುದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಹಾಗೂ ಯೋಧರ ಬಗ್ಗೆ ಗೌರವ ಮೂಡುತ್ತದೆ,” ಎಂದು ಹೇಳಿ, ಕೆಲವು ಚುಟುಕುಗಳ ಮೂಲಕ ಕಾರ್ಯಕ್ರಮದ ಉದ್ದೇಶವನ್ನು ಪ್ರಕಟಿಸಿದರು.

ನಿವೃತ್ತ ಯೋಧ ತಿಮ್ಮಪ್ಪ ಗೌಡ: ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ದೃಷ್ಟಾಂತಗಳ ಮೂಲಕ ವಿವರಿಸಿದ ಅವರು, “ಪ್ರಸ್ತುತ ಭಾರತವು ವಿಶ್ವಮಟ್ಟದಲ್ಲಿ ‘ವಿಶ್ವ ಭಾರತ’ವಾಗಿ ಹೊರಹೊಮ್ಮಲು ಪ್ರತಿಯೊಬ್ಬ ನಾಗರಿಕನೂ ದೇಶದ ಹಿತದ ಕಡೆಗೆ ಸದಾ ಜಾಗೃತನಾಗಿರಬೇಕು,” ಎಂದರು.


‘ಯಕ್ಷಸಿರಿ’ ಪ್ರಶಸ್ತಿ ಪುರಸ್ಕೃತ ಶ್ರೀರಾಮ ಗೌಡ: “ಅಕಾಡೆಮಿ ನೀಡಿದ ಗೌರವಕ್ಕಿಂತಲೂ, ನಾನು ಕಲಿತ ಶಾಲೆಯಲ್ಲೇ ಊರಿನವರೆಲ್ಲಾ ಸೇರಿ ಮಾಡುತ್ತಿರುವ ಈ ಸನ್ಮಾನ ನನ್ನ ಪಾಲಿಗೆ ಅತ್ಯಂತ ಅವಿಸ್ಮರಣೀಯ ಕ್ಷಣ,” ಎಂದು ಭಾವುಕರಾದರು.
ಪ್ರಶಸ್ತಿ ವಿತರಣೆ ಹಾಗೂ ಗಣ್ಯರ ಹಾರೈಕೆ:
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕ ಶ್ರೀ ಎಂ.ಎಸ್. ಹೆಗಡೆ ಅವರು, ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆಗೆ ಉತ್ತಮ ವೇದಿಕೆಯಾಗಿದ್ದು, ಯೋಧರು ಹಾಗೂ ಸಾಧಕರ ಸನ್ಮಾನ ಅನನ್ಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಊರಿನ ಹಿರಿಯ ಮುಖಂಡ ಶ್ರೀ ಎನ್.ಕೆ. ಗೌಡ ಹಾಗೂ ಶಾಲಾ ಅಭಿವೃದ್ಧಿ ಸಮಿತಿ (SDMC) ಅಧ್ಯಕ್ಷ ಶ್ರೀ ದಾಮೋದರ ದೇವಾಡಿಗ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬಳಿಕ ದೇಶಭಕ್ತಿ ಗೀತೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸಮರ್ಪಣಾ ವೇದಿಕೆಯ ಸದಸ್ಯ ಶ್ರೀ ಎಲ್.ಎಮ್. ಹೆಗಡೆ ಕೆರೆಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀಮತಿ ಮಹಾದೇವಿ ಗೌಡ ವಂದನಾರ್ಪಣೆ ಮಾಡಿದರು. ಸಮರ್ಪಣಾ ವೇದಿಕೆಯ ಸಂಚಾಲಕ ಶ್ರೀ ಎಸ್.ಹೆಚ್. ಗೌಡ ಕಾರ್ಯಕ್ರಮವನ್ನು ಸೊಗಸಾಗಿ ನಿರೂಪಿಸಿದರು.
About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.