August 21, 2026

ಆ.24ರಿಂದ ಬೆಂಗಳೂರಿನಲ್ಲಿ ಗ್ರಾಮ ಸಹಾಯಕರ ಅನಿರ್ದಿಷ್ಟಾವಧಿ ಧರಣಿ:

ಕೇಂದ್ರಸ್ಥಾನ ಬಿಡಲು ಅನುಮತಿಗೆ ಜಿಲ್ಲಾಧಿಕಾರಿಗೆ ಮನವಿ.

ಕಾರವಾರ: ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ಹಕ್ಕುಗಳ ರಕ್ಷಣೆ ಮತ್ತು ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ವತಿಯಿಂದ ಆಗಸ್ಟ್ 24ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಅನಿರ್ದಿಷ್ಟಾವಧಿ ಧರಣಿ-ಮುಷ್ಕರ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಸಂಘದ ಅಧ್ಯಕ್ಷರ ಕರೆಯ ಮೇರೆಗೆ ನಡೆಯಲಿರುವ ಈ ಮುಷ್ಕರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಸಹಾಯಕರು ಭಾಗವಹಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿಯಲ್ಲಿ ಪಾಲ್ಗೊಳ್ಳಲು ಕೇಂದ್ರಸ್ಥಾನದಿಂದ ಹೊರಡಲು (Headquarters permission) ಅಗತ್ಯ ಅನುಮತಿ ನೀಡುವಂತೆ ಉತ್ತರ ಕನ್ನಡ ಜಿಲ್ಲಾ ಗ್ರಾಮ ಸಹಾಯಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ಪ್ರಮೋದ್ ನಾಯ್ಕ ಅವರು ಮನವಿ ಪತ್ರವನ್ನು ಸ್ವೀಕರಿಸಿದರು.

ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಹೋರಾಟ:

ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಹಾಗೂ ಕಂದಾಯ ಇಲಾಖೆಯ ಕಾರ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಗ್ರಾಮ ಸಹಾಯಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ತಮ್ಮ ಮೂಲಭೂತ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಮನವಿ ಸಲ್ಲಿಕೆಯ ವೇಳೆ ರಾಜ್ಯ ಸಂಘದಿಂದ ನೀಡಿರುವ ಕರಪತ್ರ ಹಾಗೂ ಸರ್ಕಾರಕ್ಕೆ ಸಲ್ಲಿಸಲಾಗಿರುವ ಬೇಡಿಕೆಗಳ ಮನವಿ ಪತ್ರದ ಪ್ರತಿಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಈ ಕುರಿತು ಮಾತನಾಡಿದ ಜಿಲ್ಲಾ ಸಂಘದ ಮಾಸ್ತಯ್ಯ ನಾಯ್ಕ, “ಗ್ರಾಮ ಸಹಾಯಕರ ಹಕ್ಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಜಿಲ್ಲೆಯ ಎಲ್ಲಾ ಗ್ರಾಮ ಸಹಾಯಕರು ಒಗ್ಗಟ್ಟಿನಿಂದ ಬೆಂಬಲ ನೀಡಿ, ಬೆಂಗಳೂರಿನ ಧರಣಿಯಲ್ಲಿ ಭಾಗವಹಿಸಲಿದ್ದಾರೆ,” ಎಂದು ತಿಳಿಸಿದರು.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಗ್ರಾಮ ಸಹಾಯಕರಾದ ದೇವೇಂದ್ರ ನಾಯ್ಕ (ಶಿರಸಿ), ಸತೀಶ್ ನಾಯ್ಕ (ಹೊನ್ನಾವರ), ಹರ್ಷ ನಾಯ್ಕ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

error: Content is protected !!