September 20, 2026

ಸ್ಟೀಲ್, ಪ್ಲಾಸ್ಟಿಕ್ ಬಿಟ್ಟು ಪಾರಂಪರಿಕ ಪಾತ್ರೆ ಬಳಸಿ: ರಾಘವೇಶ್ವರ ಶ್ರೀ

ಗೋಕರ್ಣ: ಹೊಳೆಯುವ ಪಾತ್ರೆಗಳ ಹಿಂದೆ ಹೋಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಪಾತ್ರೆಗಳ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡಿ, ತಾಮ್ರ, ಕಂಚು, ಹಿತ್ತಾಳೆ ಸೇರಿದಂತೆ ಪಾರಂಪರಿಕ ಪಾತ್ರೆಗಳ ಬಳಕೆಯನ್ನು ರೂಢಿಸಿಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಕರೆ ನೀಡಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ **‘ಅನ್ನಬ್ರಹ್ಮ ಚಾತುರ್ಮಾಸ್ಯ’**ದ ಧರ್ಮಸಭೆಯಲ್ಲಿ ಸೆ.13ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಡಿ ನೀರಿನ ಪಾತ್ರೆಗಳ ಕುರಿತು ಪ್ರವಚನ ನೀಡಿದ ಶ್ರೀಗಳು, ಪಾತ್ರೆಗಳು ಕೇವಲ ನೀರು ಅಥವಾ ಆಹಾರವನ್ನು ಶೇಖರಿಸುವ ಸಾಧನಗಳಲ್ಲ. ಅವುಗಳ ಗುಣಾವಗುಣಗಳು ಅದರಲ್ಲಿರುವ ಪದಾರ್ಥಗಳ ಮೇಲೂ ಪರಿಣಾಮ ಬೀರುತ್ತವೆ ಎಂದು ಹೇಳಿದರು.

ಚಿನ್ನ, ಬೆಳ್ಳಿ, ತಾಮ್ರ, ಕಂಚು ಹಾಗೂ ಹಿತ್ತಾಳೆ ಪಾತ್ರೆಗಳು ನೀರಿನ ಗುಣವೃದ್ಧಿಗೆ ಕಾರಣವಾಗುತ್ತವೆ. ಗಾಜಿನ ಪಾತ್ರೆ ಗುಣವೃದ್ಧಿ ಮಾಡದಿದ್ದರೂ ಗುಣಹಾನಿ ಮಾಡುವುದಿಲ್ಲ. ಆದರೆ ಸ್ಟೇನ್ಲೆಸ್ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಪಾತ್ರೆಗಳನ್ನು ಸರ್ವದಾ ಬಳಕೆಗೆ ಯೋಗ್ಯವಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಪ್ರಾಚೀನ ಕಾಲದಲ್ಲಿ ಪ್ಲಾಸ್ಟಿಕ್ ಮತ್ತು ಸ್ಟೇನ್ಲೆಸ್ ಸ್ಟೀಲ್ ಇರದ ಕಾರಣ ಅವುಗಳ ಕುರಿತು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಗಳಿಲ್ಲ. ನಾಡಿ ವಿಜ್ಞಾನದಲ್ಲಿ ಸಾಧನೆ ಮಾಡಿದ ಶ್ರೀರಂಗ ಮಹಾಗುರುಗಳು ವಿವಿಧ ಪಾತ್ರೆಗಳಲ್ಲಿ ಹಾಲನ್ನು ಇಟ್ಟು ನಡೆಸಿದ ಪ್ರಯೋಗಗಳಲ್ಲಿ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳ ಬಳಕೆಯಿಂದ ದೇಹದ ವಾತ, ಪಿತ್ತ, ಕಫಗಳ ಮೇಲೆ ವ್ಯತಿರಿಕ್ತ ಪರಿಣಾಮ ಕಂಡುಬಂದಿರುವುದನ್ನು ದಾಖಲಿಸಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಆಧುನಿಕ ವಿಜ್ಞಾನವು ಆಹಾರ ದರ್ಜೆಯ ಸ್ಟೇನ್ಲೆಸ್ ಸ್ಟೀಲ್ ಬಳಕೆಯನ್ನು ಒಪ್ಪಿಕೊಂಡಿದ್ದರೂ, ವಿಜ್ಞಾನದ ಅಭಿಪ್ರಾಯಗಳು ಕಾಲಾನುಸಾರ ಬದಲಾಗುತ್ತವೆ. ಭವಿಷ್ಯದಲ್ಲಿ ಅದು ಅಯೋಗ್ಯ ಎಂದು ಹೇಳುವವರೆಗೆ ನಮ್ಮ ಅಮೂಲ್ಯ ಆರೋಗ್ಯವನ್ನು ಅಪಾಯಕ್ಕೆ ಒಡ್ಡಿಕೊಳ್ಳಬೇಕಿಲ್ಲ ಎಂದರು.

ಮಠದ ಪೂಜೆ ಹಾಗೂ ವಿವಿಧ ಬಳಕೆಗಳಲ್ಲಿ ಹಲವು ವರ್ಷಗಳಿಂದ ಸ್ಟೀಲ್ ಮತ್ತು ಪ್ಲಾಸ್ಟಿಕ್‌ಗಳನ್ನು ದೂರವಿಡಲಾಗಿದೆ. ಸಮಾಜವೂ ಆರೋಗ್ಯದ ದೃಷ್ಟಿಯಿಂದ ಪಾರಂಪರಿಕ ಪಾತ್ರೆಗಳ ಬಳಕೆಯನ್ನು ಅಳವಡಿಸಿಕೊಳ್ಳಬೇಕು. ದುಂದು ವೆಚ್ಚವನ್ನು ಕಡಿಮೆ ಮಾಡಿ ತಾಮ್ರ, ಕಂಚು, ಹಿತ್ತಾಳೆ ಹಾಗೂ ಗಾಜಿನ ಪಾತ್ರೆಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಿರಸಿ ಶಾಸಕ ಭೀಮಣ್ಣ ಟಿ. ನಾಯ್ಕ್, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು. ಬೆಂಗಳೂರು ಉತ್ತರ ಮಂಡಲದ ಪರವಾಗಿ ಕೆ.ಎಂ. ದಿವಾಕರ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಗಣಪತಿ ಪುದುಕೊಳಿ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.

“ಜೀವ ಹಾಗೂ ಜೀವನಕ್ಕಿಂತ ಬೆಲೆ ದೊಡ್ಡದ್ದಲ್ಲ. ದುಂದು ವೆಚ್ಚವನ್ನು ಕಡಿತಗೊಳಿಸಿ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಪಾತ್ರೆಗಳನ್ನು ದೂರ ಮಾಡಿ ಪಾರಂಪರಿಕ ಪಾತ್ರೆಗಳ ಬಳಕೆಯನ್ನು ರೂಢಿಸಿಕೊಳ್ಳಿ.”
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

About The Author

error: Content is protected !!