May 25, 2026

ಸೋಡಿಗದ್ದೆ ಮಹಾಸತಿ ದೇವಸ್ಥಾನ ಶಿಲಾನ್ಯಾಸ: ಧರ್ಮಾಚರಣೆಯಿಂದ ಜೀವನ ಸಾರ್ಥಕತೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ: ಮಾನವನು ಸುಖಮಯ ಜೀವನ ಸಾಗಿಸಬೇಕಾದರೆ ಧರ್ಮವನ್ನು ಆಚರಿಸಬೇಕು. ಭಕ್ತಿ, ಶ್ರದ್ಧೆ ಹಾಗೂ ಗುರುಭಕ್ತಿಯ ಮೂಲಕವೇ ಜೀವನಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಶ್ರೀ ಮಹಾಸತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ, ಸೋಡಿಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ ನೂತನ ಶಿಲಾಮಯ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಕ್ತರನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು.

ಈ ಭಾಗದ ಮೀನುಗಾರರು ಹಾಗೂ ನಾಮಧಾರಿ ಸಮುದಾಯದವರು ಉತ್ತಮ ಬಾಂಧವ್ಯ ಹೊಂದಿದ್ದು, ಧರ್ಮ ಮತ್ತು ಆಚಾರವನ್ನು ಅರಿತು ನಡೆಯುವವನು ಮೋಕ್ಷದ ಮಾರ್ಗವನ್ನು ಕಂಡುಕೊಳ್ಳುತ್ತಾನೆ ಎಂದರು. ಕೇವಲ ದೇವಸ್ಥಾನಕ್ಕೆ ತೆರಳುವುದರಿಂದ ದೇವರ ಆಶೀರ್ವಾದ ಸಿಗುವುದಿಲ್ಲ. ಗುರುದಾಸನಾದಾಗ ಮಾತ್ರ ದೇವರ ಕೃಪೆ ದೊರೆಯುತ್ತದೆ. ಗುರು-ಶಿಷ್ಯರ ಸಂಬAಧ ಪ್ರಶ್ನಾತೀತವಾದದ್ದು ಎಂದು ಹೇಳಿದರು.

ಮಹಾಸತಿ ದೇವಿಯ ಮೇಲಿನ ಭಕ್ತಿ ಮತ್ತು ಶ್ರದ್ಧೆ ಭಕ್ತರನ್ನು ಸದಾ ಕಾಪಾಡುತ್ತದೆ. ದೇಹದಲ್ಲಿ ಶಕ್ತಿ, ಮನಸ್ಸಿನಲ್ಲಿ ಭಕ್ತಿ ಹಾಗೂ ಶ್ರದ್ಧೆ ಇರುವಾಗಲೇ ಉತ್ತಮ ಕಾರ್ಯಗಳನ್ನು ಮಾಡಬೇಕು. ಅದು ಮುಂದಿನ ಜೀವನಕ್ಕೆ ಸಂಗ್ರಹವಾಗುತ್ತದೆ. ಅಧಿಕಾರ ಮತ್ತು ಸಂಪತ್ತನ್ನು ಸದ್ಬಳಕೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಸಚಿವ ಮಂಕಾಳ ಎಸ್ ವೈದ್ಯ, ಮಾತನಾಡಿ, ಧಾರ್ಮಿಕ ಕ್ಷೇತ್ರಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಮಠಗಳಲ್ಲಿ ಕೊರತೆ ಉಂಟಾದರೆ ಅದು ಸಮಾಜ, ರಾಜ್ಯ ಮತ್ತು ದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದರು. ಹಲವು ವರ್ಷಗಳ ಕನಸಾಗಿದ್ದ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾಗಿರುವುದು ಸಂತಸದ ಸಂಗತಿ. ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗೆ ಅಗತ್ಯವಿರುವ ಪ್ರಕ್ರಿಯೆಗಳು ಹಾಗೂ ಹಂತ ಹಂತದ ಕಾಮಗಾರಿಗಳನ್ನು ಜವಾಬ್ದಾರಿಯಿಂದ ಕೈಗೊಳ್ಳಲಾಗುವುದು. ಸಾರ್ವಜನಿಕರ ಹಣ ಸದ್ಬಳಕೆಯಾಗುವಂತೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುವುದು ಎಂದರು.
ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿದಾಸ ಮೊಗೇರ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಭಟ್ಕಳ ಉಪವಿಭಾಗಾಧಿಕಾರಿ ಮಹೇಶ್ ಜೆ., ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಳವಾರ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ನಾಗರಾಜ ನಾಯ್ಕ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಅಚ್ಯುತ ಎಂ. ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಸದಸ್ಯ ಮಾಸ್ತಿ ಜೆ. ನಾಯ್ಕ ಸ್ವಾಗತಿಸಿದರು. ದೇವಾನಂದ ಮೊಗೇರ ಹಾಗೂ ಭಾಸ್ಕರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ದೇವಯ್ಯ ನಾಯ್ಕ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗರಾಜ ಇ.ಎಚ್. ವಂದಿಸಿದರು.

About The Author

error: Content is protected !!