

ಹೊನ್ನಾವರ: ಸರ್ಕಾರವು ಇಂದು ವಿವಿಧ ಯೋಜನೆಗಳ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಆದಾಗ್ಯೂ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಒಟ್ಟಾರೆ ಬೆಳವಣಿಗೆಯಲ್ಲಿ ಸ್ಥಳೀಯರ ಹಾಗೂ ದಾನಿಗಳ ಸಹಕಾರ ಅತ್ಯಂತ ಮುಖ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಜಯಶ್ರೀ ನಾಯ್ಕ ಹೇಳಿದರು.

ತಾಲ್ಲೂಕಿನ ಮಾಳ್ಕೋಡ-ಕೆಳಗಿನ ಇಡಗುಂಜಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿದ್ದಾಪುರದ ಆಧಾರ ಶಿಕ್ಷಣ, ಸ್ವ-ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಹಾಗೂ ಛತ್ರಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಕ್ಕಳಿಗೆ ಆಸರೆಯಾದ ಆಧಾರ ಸಂಸ್ಥೆ:
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ, “ಈ ಶಾಲೆಯು ಇಂದು ಉತ್ತಮ ರೀತಿಯಲ್ಲಿ ಬೆಳವಣಿಗೆ ಕಂಡಿದೆ. ಆಧಾರ ಸಂಸ್ಥೆಯವರು ಪ್ರತಿ ವರ್ಷವೂ ಶಾಲೆಯ ಎಲ್ಲಾ ಮಕ್ಕಳಿಗೂ ಶೈಕ್ಷಣಿಕ ಸಾಮಗ್ರಿ ನೀಡುತ್ತಾ ಬಂದಿದ್ದಾರೆ. ಈ ವರ್ಷ ಮಳೆಗಾಲದ ಹಿನ್ನೆಲೆಯಲ್ಲಿ ಛತ್ರಿಗಳನ್ನು ನೀಡುತ್ತಿರುವುದು ಮಕ್ಕಳಿಗೆ ಇನ್ನಷ್ಟು ಅನುಕೂಲವಾಗುವಂತೆ ಮಾಡಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು” ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಭಾಗೀಯ ನಿವೃತ್ತ ಪರಿಸರ ಅಧಿಕಾರಿ ವಿಜಯಾ ಹೆಗಡೆ ಮಾತನಾಡಿ, “ಇಂದು ಮಕ್ಕಳಿಗೆ ಕಲಿಕೆಗೆ ಬೇಕಾಗುವ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ಆಗುತ್ತಿದೆ. ಮಕ್ಕಳು ಓದುವುದರಲ್ಲಿ ಕಂಜೂಸ್ ಮಾಡದೆ, ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಸಾಧನೆ ಮಾಡಬೇಕಾಗಿದೆ” ಎಂದು ಕರೆ ನೀಡಿದರು. ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಸುಧೀಶ ನಾಯ್ಕ ಹಾಗೂ ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಗೋಪಾಲ ಜಟ್ಟಿ ನಾಯ್ಕ ಅವರು ಮಾತನಾಡಿ ಶುಭ ಹಾರೈಸಿದರು.


ಶಿಕ್ಷಕರಿಗೆ ಬೋಧಕೇತರ ಕರ್ತವ್ಯಗಳಿಂದ ಮುಕ್ತಿ ನೀಡಿ:
ಕಾರ್ಯಕ್ರಮದಲ್ಲಿ ಮಾತನಾಡಿದ ಆಧಾರ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ನಾಯ್ಕ ಮಾಳ್ಕೋಡ ಅವರು, “ಇಂದು ಶಿಕ್ಷಕರುಗಳನ್ನು ಇತರೆ ಸಾಮಾಜಿಕ ಕರ್ತವ್ಯಗಳಿಂದ ಮುಕ್ತಿಗೊಳಿಸಬೇಕಾದ ಅಗತ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನಮೂನೆ ತುಂಬುವ ಕೆಲಸವೇ ಹೆಚ್ಚಾಗಿದೆ. ಹಾಗಾಗಿ ಶಾಲೆಗಳಿಗೆ ಬೋಧಕೇತರ ಸಿಬ್ಬಂದಿಗಳನ್ನು ನೇಮಕಗೊಳಿಸಿ, ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ಪಾಠ ಮಾಡುವ ವಾತಾವರಣ ನಿರ್ಮಾಣವಾಗಬೇಕು” ಎಂದು ಒತ್ತಾಯಿಸಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ ಎಂ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ ಬಿಳಿಯ ನಾಯ್ಕ, ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ ಜಿ. ಹೆಗಡೆ ಹಾಗೂ ಎಸ್‌ಡಿಎಂಸಿ ಸದಸ್ಯರಾದ ಲಕ್ಷ್ಮಿ ನಾಯ್ಕ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಲಕ್ಷ್ಮಿ ಎನ್. ಭಟ್ ಸ್ವಾಗತಿಸಿದರು. ಶಿಕ್ಷಕ ವಿ.ಜಿ. ಭಟ್ ಕಾರ್ಯಕ್ರಮ ನಿರೂಪಿಸಿದರೆ, ಭಾಸ್ಕರ ನಾಯ್ಕ ವಂದನಾರ್ಪಣೆ ಮಾಡಿದರು.
About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.