ಕಿಕ್ಕೇರಿ: ‘ಮೈಸೂರು ಮಲ್ಲಿಗೆ’ ಖ್ಯಾತಿಯ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಜನ್ಮಭೂಮಿಯಾದ ಕೆ.ಆರ್. ಪೇಟೆ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಕಿಕ್ಕೇರಿ ಈಗ ಕಸದ ನರಕವಾಗಿ ಮಾರ್ಪಟ್ಟಿದೆ. ಕಾವ್ಯಲೋಕದಲ್ಲಿ ಹೆಸರು ಮಾಡಿದ್ದ ಈ ಪುಣ್ಯಭೂಮಿ, ಈಗ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ‘ಕಸ ಸಂಗ್ರಹಣೆಯ ಕಿಕ್ಕೇರಿ’ ಎಂಬ ಕುಖ್ಯಾತಿಗೆ ಒಳಗಾಗುತ್ತಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರು-ಚನ್ನರಾಯಪಟ್ಟಣ ಹೆದ್ದಾರಿಯ ಕೃಷಿ ಮಾರುಕಟ್ಟೆಯ ಎದುರು ಹಾಗೂ ಪಕ್ಕದಲ್ಲೇ ಇರುವ ಕಿಕ್ಕೇರಿ ಮುಖ್ಯ ಪ್ರವೇಶ ದ್ವಾರದಲ್ಲೇ ಕಸದ ಬೃಹತ್ ರಾಶಿಗಳು ಪ್ರಯಾಣಿಕರನ್ನು ಸ್ವಾಗತಿಸುತ್ತಿವೆ!
ನಾರುತ್ತಿರುವ ಹೆದ್ದಾರಿ: ಸಾಂಕ್ರಾಮಿಕ ರೋಗದ ಭೀತಿ
ದುರ್ವಾಸನೆ: ಪ್ಲಾಸ್ಟಿಕ್ ಚೀಲಗಳು, ಕೊಳೆತ ಆಹಾರ ಪದಾರ್ಥಗಳು ಹಾಗೂ ಸತ್ತ ಪ್ರಾಣಿಗಳ ಕಳೇಬರದಿಂದಾಗಿ ಇಡೀ ಪ್ರದೇಶ ದುರ್ವಾಸನೆಯಿಂದ ಕೂಡಿದೆ.
ಪ್ರಯಾಣಿಕರ ಪರದಾಟ: ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಈ ಹೆದ್ದಾರಿಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ನರಕಸದೃಶ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಅನುದಾನವಿದ್ದರೂ ಶೂನ್ಯ ಸಾಧನೆ: ಸರ್ಕಾರದಿಂದ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ವೈಜ್ಞಾನಿಕ ಕಸ ವಿಲೇವಾರಿ ಘಟಕ ನಿರ್ಮಿಸಲು ಲಕ್ಷಾಂತರ ರೂ. ಅನುದಾನ ಬರುತ್ತಿದ್ದರೂ, ಕಿಕ್ಕೇರಿ ಗ್ರಾಮ ಪಂಚಾಯಿತಿಯಲ್ಲಿ ಇಂದಿಗೂ ಸುಸಜ್ಜಿತ ಕಸ ವಿಲೇವಾರಿ ಘಟಕ ನಿರ್ಮಾಣಗೊಂಡಿಲ್ಲ. ಇದರಿಂದಾಗಿ ಸಾರ್ವಜನಿಕರು ಅನಿವಾರ್ಯವಾಗಿ ರಸ್ತೆ ಬದಿಯನ್ನೇ ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿದ್ದಾರೆ.
ನಿಮಗೆ ಯಾವುದರಲ್ಲಿ ಹೊಡೆಯಬೇಕು?”: ಕಸದ ರಾಶಿ ಮುಂದೆ ಆಕ್ರೋಶದ ಬೋರ್ಡ್!
ಕಸದ ಸಮಸ್ಯೆಯಿಂದ ಬೇಸತ್ತ ಮಾತೃಶ್ರೀ ಉಚಿತ ವೃದ್ಧಾಶ್ರಮದ ಸಂಸ್ಥಾಪಕರಾದ ಜೈ ಹಿಂದ್ ನಾಗಣ್ಣ ಅವರು ಇಂದು ಅದೇ ಕಸದ ರಾಶಿಯ ಬಳಿ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಎಚ್ಚರಿಕೆಯ ನಾಮಫಲಕವೊಂದನ್ನು ಅಳವಡಿಸಿರುವ ಅವರು, “ಥೂ ನಿಮ್ಮ ಜನ್ಮಕ್ಕೆ… ಇಲ್ಲಿ ಕಸ ಹಾಕಬೇಡಿ ಅಂತ ನಾಮಫಲಕ ಹಾಕಿದ್ರೂ ಕಸ ಹಾಕ್ತೀರಲ್ಲಾ, ನಿಮಗೆ ಯಾವುದರಲ್ಲಿ ಹೊಡೆಯಬೇಕು?” ಎಂದು ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ ಕಸ ಹಾಕುವವರ ವಿರುದ್ಧ ಮತ್ತು ಪಂಚಾಯಿತಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಜಾಣ ಕುರುಡಾದ ಅಧಿಕಾರಿಗಳು: ಶಾಶ್ವತ ಪರಿಹಾರ ಯಾವಾಗ?
ಇಷ್ಟೆಲ್ಲಾ ಸಾರ್ವಜನಿಕರ ಆಕ್ರೋಶ, ರೋಗದ ಭೀತಿ ಕಣ್ಣೆದುರೇ ಕಾಣಿಸುತ್ತಿದ್ದರೂ ಕಿಕ್ಕೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ಜಾಣ ಕುರುಡಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಹೆದ್ದಾರಿ ಬದಿಯ ಕಸದ ರಾಶಿಯನ್ನು ತೆರವುಗೊಳಿಸಿ, ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತಾರಾ? ಕಾದು ನೋಡಬೇಕಾಗಿದೆ.
– ವಿಶೇಷ ವರದಿ: ಶಂಭು ಕಿಕ್ಕೇರಿ
About The Author


More Stories
ಗಂಗೇನಹಳ್ಳಿ ಕೆರೆಗೆ ನೀರು ತುಂಬಿಸುವಂತೆ ಗ್ರಾಮಸ್ಥರ ಆಗ್ರಹ: ಹೇಮಾವತಿ ಇಲಾಖೆಗೆ ಮನವಿ
ಫಿನ್ಲ್ಯಾಂಡ್ನಲ್ಲಿ ಚಿನ್ನದ ಪದಕ ಗೆದ್ದ ಗ್ರಾಮೀಣ ಪ್ರತಿಭೆ ಹೆಗ್ಗಡಹಳ್ಳಿ ಜಗನ್ನಾಥ್ ಹೆಚ್.ಎಂ
ಕಿಕ್ಕೇರಿ ಡೈರಿ ಅಧ್ಯಕ್ಷರಾಗಿ ಕೆ.ಟಿ. ರಮೇಶ್ ಎರಡನೇ ಬಾರಿಗೆ ಅವಿರೋಧ ಆಯ್ಕೆ.