August 23, 2026

ಹೈಕೋರ್ಟ್ ಆದೇಶ ಉಲ್ಲಂಘಿಸಿ ಶರಾವತಿ ಕಾಡಿನಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಮರಗಳ ಗುರುತು: ಸ್ಥಳೀಯರ ತೀವ್ರ ಆತಂಕ

ಸ್ವರ್ಣವಲ್ಲೀ ಶ್ರೀ ಹಾಗೂ ಬಂಗಾರಮಕ್ಕಿ ಶ್ರೀಗಳಿಂದ ಚಾತುರ್ಮಾಸದಲ್ಲಿ ‘ಹಸಿರು ಸಂಕಲ್ಪ’ ಜನಾಂದೋಲನ

ಕೋರ್ಟ್ ತಡೆಯಾಜ್ಞೆ ಇದ್ದರೂ ಗೇರುಸೊಪ್ಪೆಯ ಬೇಗೋಡಿ ಕಾಡಿನಲ್ಲಿ ಸಿಬ್ಬಂದಿಯಿಂದ ಸಮೀಕ್ಷೆ

ಅಭಿವೃದ್ಧಿಯ ನೆಪದಲ್ಲಿ ಪರಿಸರ ನಾಶ ನಿಲ್ಲಿಸಲು ‘ಶರಾವತಿ ಕಣಿವೆ ಉಳಿಸಿ ಹೋರಾಟ ಸಮಿತಿ’ ಆಗ್ರಹ


ಹೊನ್ನಾವರ:   ಒಂದೆಡೆ ಪ್ರಕೃತಿ ರಕ್ಷಣೆಯೇ ಪರಮ ಧರ್ಮವೆಂದು ಭಾವಿಸಿ ಪಶ್ಚಿಮಘಟ್ಟದ ಉಳಿವಿಗಾಗಿ ಸೋಂದಾ ಸ್ವರ್ಣವಲ್ಲೀ ಪೀಠಾಧೀಶರು ಹಾಗೂ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಅವರು ಈ ಬಾರಿಯ ಚಾತುರ್ಮಾಸ ವ್ರತವನ್ನು ‘ಹಸಿರು ಸಂಕಲ್ಪ’ದ ಜನಾಂದೋಲನವನ್ನಾಗಿ ರೂಪಿಸಿ ವೈಶಿಷ್ಟ್ಯಪೂರ್ಣ ಚಾಲನೆ ನೀಡಿದ್ದಾರೆ. ಆದರೆ ಇನ್ನೊಂದೆಡೆ, ನ್ಯಾಯಾಲಯದ ಆದೇಶವನ್ನೂ ಲೆಕ್ಕಿಸದೆ ಶರಾವತಿಯ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ನಿಗಮ ಹಾಗೂ ಅರಣ್ಯ ಇಲಾಖೆ ಸಮೀಕ್ಷೆ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ಹಂತದಲ್ಲಿದ್ದು, ಮುಂದಿನ ಆದೇಶದವರೆಗೆ ಯೋಜನೆಯ ನೆಲಮಟ್ಟದ ಎಲ್ಲಾ ಕೆಲಸಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ವಿದ್ಯುತ್ ನಿಗಮಕ್ಕೆ (KPCL) ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಹೀಗಿದ್ದರೂ, ಗುರುಪೂರ್ಣಿಮೆಯ ದಿನದಿಂದಲೇ ಶರಾವತಿ ಸಿಂಗಳಿಕ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯವಾದ ಗೇರುಸೊಪ್ಪೆಯ ‘ಬೇಗೋಡಿ’ ಕಾಡಿನಲ್ಲಿ ಯೋಜನೆಯ ಪೂರ್ವಭಾವಿ ಸಮೀಕ್ಷೆ ನಡೆಸಲಾಗುತ್ತಿದೆ.
ಅರಣ್ಯ ನಾಶ ಮಾಡುವ ಉದ್ದೇಶದಿಂದ ಅರಣ್ಯ ಇಲಾಖೆ ಹಾಗೂ ವಿದ್ಯುತ್ ನಿಗಮದ ಸಿಬ್ಬಂದಿಗಳು ದಟ್ಟ ಅರಣ್ಯದ ಮರಗಳಿಗೆ ಮೊಳೆ ಹೊಡೆದು ಕ್ರಮ ಸಂಖ್ಯೆಯ ಸ್ಟಿಕ್ಕರ್‌ಗಳನ್ನು ಅಂಟಿಸುತ್ತಿರುವುದು ಬೆಳಕಿಗೆ ಬಂದಿದೆ. ಹೈಕೋರ್ಟ್ ಆದೇಶದ ಬಳಿಕವೂ ವಿದ್ಯುತ್ ನಿಗಮವು ಯೋಜನೆಯ ಅನುಷ್ಠಾನಕ್ಕೆ ಅತ್ಯಂತ ಆತುರ ತೋರುತ್ತಿರುವುದು ಸ್ಥಳೀಯ ಗ್ರಾಮಸ್ಥರು ಹಾಗೂ ಪರಿಸರ ಪ್ರೇಮಿಗಳಲ್ಲಿ ತೀವ್ರ ಆತಂಕ ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ.

    ಸರ್ಕಾರ ತಕ್ಷಣ ಯೋಜನೆ ಮರುಪರಿಶೀಲಿಸಲಿ:

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ‘ಶರಾವತಿ ನದಿಕಣಿವೆ ಉಳಿಸಿ ಹೋರಾಟ ಸಮಿತಿ’ಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಹಾಗೂ ಕಾರ್ಯಾಧ್ಯಕ್ಷ ಮಂಜುನಾಥ ಎಂ. ನಾಯ್ಕ ಗೇರುಸೊಪ್ಪ, “ಅಭಿವೃದ್ಧಿಯ ನೆಪದಲ್ಲಿ ನಿಸರ್ಗಕ್ಕೆ ಮತ್ತೆ ಚೇತರಿಸಿಕೊಳ್ಳಲಾಗದಷ್ಟು ಭಾರಿ ಹಾನಿ ಉಂಟುಮಾಡುವ ಇಂತಹ ವಿನಾಶಕಾರಿ ಯೋಜನೆಗಳನ್ನು ಸರ್ಕಾರ ತಕ್ಷಣವೇ ಮರುಪರಿಶೀಲಿಸಿ ಕೈಬಿಡಬೇಕು. ಕೋರ್ಟ್ ಆದೇಶವನ್ನು ಗೌರವಿಸಿ ಕಾಡಿನಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು,” ಎಂದು ಉಗ್ರವಾಗಿ ಆಗ್ರಹಿಸಿದ್ದಾರೆ.

    About The Author

    error: Content is protected !!