

ಕಾಮಕೋಡ ದೇವರಕಾಡಿನಲ್ಲಿ ವನಮಹೋತ್ಸವ ಕಾರ್ಯಕ್ರಮ

ವಿಜ್ಞಾನಿ ಡಾ. ಎಂ. ಡಿ. ಸುಭಾಷ್ ಚಂದ್ರನ್ ಅವರಿಗೆ ಸನ್ಮಾನ

ಹೊನ್ನಾವರ: “ಕಾನೂನಿನಂತೆ ನಮ್ಮ ಕೆಲಸವನ್ನು ನಾವು ನಿಭಾಯಿಸುವುದರಲ್ಲಿ ಬದುಕಿನ ಸಾರ್ಥಕತೆಯಿದೆ. ಅರಣ್ಯ ಭೂಮಿಯನ್ನು ಅತಿಕ್ರಮಣದಾರರಿಂದ ರಕ್ಷಿಸುವ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವ ಮೂಲಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಸರ ಹಾಗೂ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಬೇಕು” ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಯೋಗೀಶ್ ಸಿ. ಕೆ. ಕರೆ ನೀಡಿದರು.
ಅರಣ್ಯ ಇಲಾಖೆ, ಕಾಮಕೋಡ ದುರ್ಗಮ್ಮ ದೇವಸ್ಥಾನ, ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕ, ಬೇತ್ಮನೆ ಶಾಲೆ ಹಾಗೂ ಕಾಮಕೋಡ ಪರಿಸರ ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಮಕೋಡ ದೇವರಕಾಡಿನಲ್ಲಿ ಗುರುವಾರ ನಡೆದ ‘ವನಮಹೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ವಿಜಯಕುಮಾರ ಕಾಳಪ್ಪನವರ್ ಮಾತನಾಡಿ, “ಪ್ರಾಂತೀಯ ಅಗತ್ಯಕ್ಕೆ ಅನುಗುಣವಾಗಿ ಅರಣ್ಯ ಬೆಳೆಸಬೇಕಿದ್ದು, ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರವನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ” ಎಂದರು.


ಡಾ. ಎಂ. ಡಿ. ಸುಭಾಷ್ ಚಂದ್ರನ್ ಅವರಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪರಿಸರ ವಿಜ್ಞಾನ ಕೇಂದ್ರ ಕುಮಟಾ ಘಟಕದ ಹಿರಿಯ ವಿಜ್ಞಾನಿ ಡಾ. ಎಂ. ಡಿ. ಸುಭಾಷ್ ಚಂದ್ರನ್ ಅವರನ್ನು ಸನ್ಮಾನಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು, “ಕಾಮಕೋಡ ದೇವರಕಾಡು ಪಾರಂಪರಿಕ ತಾಣವೆಂದು ಘೋಷಿಸಲ್ಪಡುವ ಎಲ್ಲಾ ಅರ್ಹತೆಗಳನ್ನು ಪಡೆದಿದೆ. ಈ ಕುರಿತು ಜೀವವೈವಿಧ್ಯ ಮಂಡಳಿಗೆ ಪ್ರಸ್ತಾಪನೆ ಸಲ್ಲಿಸಲು ಅಗತ್ಯ ನೆರವು ನೀಡುತ್ತೇನೆ” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ (RFO) ಪ್ರಮೋದ ನಾಯ್ಕ ಬಾವಿಕೇರಿ ಹಾಗೂ ಮುಖ್ಯ ಶಿಕ್ಷಕ ವಿಘ್ನೇಶ್ವರ ಭಟ್ಟ ಅನಿಸಿಕೆ ಹಂಚಿಕೊಂಡರು.


ವಿವಿಧ ಸಸಿಗಳ ನೆಡುತೋಪು:
ಸಮಾರಂಭದ ಅಂಗವಾಗಿ ಹಲಸು, ಹೊನ್ನೆ, ಅತ್ತಿ ಮೊದಲಾದ ವಿವಿಧ ಜಾತಿಯ ಗಿಡಗಳನ್ನು ದೇವರಕಾಡಿನಲ್ಲಿ ನೆಡಲಾಯಿತು. ಬಳಿಕ ಅಧಿಕಾರಿಗಳು ನೆರೆದಿದ್ದ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು.
ಉಪಸ್ಥಿತಿ ಮತ್ತು ನಿರ್ವಹಣೆ:
ಕಾರ್ಯಕ್ರಮದಲ್ಲಿ ಉಪ ವಲಯ ಅರಣ್ಯಾಧಿಕಾರಿ ಜಗನ್ನಾಥ ಗೌಡ, ಕಾಮಕೋಡ ಪರಿಸರ ಕೂಟ ಹಾಗೂ ದೇವಸ್ಥಾನ ಸಮಿತಿಯ ಮಾದೇವರ ನಾಯ್ಕ, ಎಚ್. ಎಲ್. ಗುರುದತ್ತ, ಪ್ರಭಾಕರ ಭಟ್ಟ, ಸುಬ್ರಹ್ಮಣ್ಯ ಹೆಗಡೆ, ಗಾಯತ್ರಿ ನಾಯ್ಕ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾಮಕೋಡ ಪರಿಸರ ಕೂಟದ ಅಧ್ಯಕ್ಷ ಡಾ. ಎಂ. ಜಿ. ಹೆಗಡೆ ಸ್ವಾಗತಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ನಾಗರಾಜ ಹೆಗಡೆ ಅಪಗಾಲ ಧನ್ಯವಾದ ಸಮರ್ಪಿಸಿದರು.
About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.