August 24, 2026

ಕರಾವಳಿಗೆ ಅನುದಾನ ನೀಡದೆ ಕಾಂಗ್ರೆಸ್ ಸರ್ಕಾರ ತಾರತಮ್ಯ: ಹೊನ್ನಾವರದಲ್ಲಿ ಶಾಸಕ ಸುನೀಲ್ ಕುಮಾರ್ ವಾಗ್ದಾಳಿ

ಹೊನ್ನಾವರ: “ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಕರಾವಳಿ ಭಾಗಕ್ಕೆ ಯಾವುದೇ ಅನುದಾನ ನೀಡದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಅಭಿವೃದ್ಧಿಯನ್ನೇ ಮರೆತಿರುವ ಈ ಸರ್ಕಾರ ಸಂಪೂರ್ಣ ‘ಕರಾವಳಿ ವಿರೋಧಿ ಸರ್ಕಾರ’ವಾಗಿದೆ” ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಪಟ್ಟಣದ ನ್ಯೂ ಇಂಗ್ಲಿಷ್ ಸಭಾಭವನದಲ್ಲಿ ತಾಲೂಕು ಯುವಮೋರ್ಚಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ‘ಸಂಘಟನಾ ಸಪ್ತಾಹ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

“ದೇಶದಲ್ಲಿ ಯುವ ಸಮುದಾಯವನ್ನು ದಾರಿ ತಪ್ಪಿಸುವ, ಅರಾಜಕತೆ ಸೃಷ್ಟಿಸುವ ಮತ್ತು ದೇಶವಿರೋಧಿ, ಹಿಂದೂ ವಿರೋಧಿ ಘೋಷಣೆಗಳನ್ನು ಕೂಗುವ ಕೆಲಸಗಳು ನಡೆಯುತ್ತಿವೆ. ಇಂತಹ ದಾರಿ ತಪ್ಪುತ್ತಿರುವ ಯುವಕರಿಗೆ ರಾಷ್ಟ್ರಾಭಿಮಾನ ಹಾಗೂ ಅಭಿವೃದ್ಧಿ ಪರ ಚಿಂತನೆಗಳ ಕುರಿತು ಅರಿವು ಮೂಡಿಸುವ ದೊಡ್ಡ ಜವಾಬ್ದಾರಿ ಯುವಮೋರ್ಚಾ ಮೇಲಿದೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ರೇಷನ್ ಕಾರ್ಡ್ ನೀಡಿಲ್ಲ, 4 ತಿಂಗಳಿಂದ ಪಿಂಚಣಿ ಬಾರದೆ ಬಡವರು ಸಂಕಷ್ಟದಲ್ಲಿದ್ದಾರೆ. ಶಾಲಾ ಪಠ್ಯಪುಸ್ತಕಗಳನ್ನೂ ಸರಿಯಾಗಿ ವಿತರಿಸಿಲ್ಲ. ಸರ್ಕಾರದ ಈ ವೈಫಲ್ಯಗಳ ವಿರುದ್ಧ ಯುವಮೋರ್ಚಾ ಜನಪರ ಹೋರಾಟ ರೂಪಿಸಬೇಕು.”ಎಂದರು.

ವಿರೋಧ ಪಕ್ಷದ ಕ್ಷೇತ್ರಗಳಿಗೆ ಅನುದಾನ ತಾರತಮ್ಯ – ಶಾಸಕ ದಿನಕರ್ ಶೆಟ್ಟಿ:
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ, “ರಾಜ್ಯ ಸರ್ಕಾರ ಅನುದಾನ ಹಂಚಿಕೆಯಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ತಾರತಮ್ಯ ಮಾಡುತ್ತಿದೆ. ಕಾಂಗ್ರೆಸ್ ಮುಖಂಡರು ಅಭಿವೃದ್ಧಿ ಕೆಲಸಗಳಿಗೆ ತಡೆ ಒಡ್ಡುವ ಕೆಲಸ ಮಾಡುತ್ತಿದ್ದಾರೆ. ಆದರೂ ನಮ್ಮ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದಾರೆ” ಎಂದರು.

ಯುವಮೋರ್ಚಾ ಹಾಗೂ ಮಹಿಳಾ ಮೋರ್ಚಾಗೆ ಪ್ರಶಂಸೆ:
ಮಾಜಿ ಶಾಸಕಿ ರೂಪಾಲಿ ನಾಯ್ಕ್ ಮಾತನಾಡಿ, ಜಿಲ್ಲೆಯಲ್ಲಿ ಯುವಮೋರ್ಚಾ ಹಾಗೂ ಮಹಿಳಾ ಮೋರ್ಚಾ ಪಕ್ಷವನ್ನು ಕೆಳಮಟ್ಟದಿಂದ ಸಂಘಟಿಸುವಲ್ಲಿ ಅತ್ಯುತ್ತಮವಾಗಿ ಶ್ರಮಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಜಯ – ಎನ್.ಎಸ್. ಹೆಗಡೆ:
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಜಿಲ್ಲೆಯ 17 ಮಂಡಲಗಳಲ್ಲೂ ಯುವಮೋರ್ಚಾ ಸಕ್ರಿಯವಾಗಿದ್ದು, ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಪಕ್ಷದ ಗೆಲುವಿಗೆ ಯುವ ಶಕ್ತಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಡ್ರಗ್ಸ್ ವಿರುದ್ಧ ಜಾಗೃತಿ ಅಭಿಯಾನಕ್ಕೆ ಚಾಲನೆ

ಯುವ ಸಮುದಾಯವನ್ನು ಡ್ರಗ್ಸ್ ಹಾಗೂ ದುಶ್ಚಟಗಳಿಂದ ದೂರವಿಡುವ ನಿಟ್ಟಿನಲ್ಲಿ ಕಾರ್ಯಕ್ರಮದ ಸಂದರ್ಭದಲ್ಲಿ ವಿಶೇಷ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ್, ಮಾಜಿ ಶಾಸಕ ಸುನೀಲ್ ನಾಯ್ಕ್, ಮಂಡಲ ಅಧ್ಯಕ್ಷ ಯೋಗೀಶ್ ಮೇಸ್ತಾ, ಮುಖಂಡರಾದ ಈಶ್ವರ ನಾಯ್ಕ್, ಕೆ.ಜಿ. ನಾಯ್ಕ್, ಎಂ.ಜಿ. ಭಟ್, ವೆಂಕಟೇಶ್ ನಾಯ್ಕ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯುವಮೋರ್ಚಾ ತಾಲೂಕು ಅಧ್ಯಕ್ಷ ಶಿವಾನಂದ ಮರಾಠಿ ಸ್ವಾಗತಿಸಿದರೆ, ಕೃಷ್ಣ ಜೋಶಿ ಕಾರ್ಯಕ್ರಮ ನಿರೂಪಿಸಿದರು.

    About The Author

    error: Content is protected !!