August 23, 2026

ಮಂಕಾಳು ವೈದ್ಯರಿಗೆ ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಆಕ್ರೋಶ: ಹೈಕಮಾಂಡ್ ನಡೆಗೆ ಮಂಕಿ ಕಾಂಗ್ರೆಸ್ ಮುಖಂಡರ ಬೇಸರ

ಮಂಕಿ: ಬಡವರ ಬಂಧು, ಜನಸೇವೆಯ ಮೂಲಕವೇ ಸಚಿವರಾಗಿ ಅಧಿಕಾರ ಸ್ವೀಕರಿಸಿ ಜಿಲ್ಲೆಯನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಶ್ರಮಿಸುತ್ತಿದ್ದ ಮಂಕಾಳು ವೈದ್ಯರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡ ರೀತಿ ನಿಜಕ್ಕೂ ಬೇಸರದ ಸಂಗತಿ. ಇದು ಇಡೀ ಉತ್ತರ ಕನ್ನಡ ಜಿಲ್ಲೆಗೆ ಮಾಡಿದ ದ್ರೋಹ ಎಂದು ಮಂಕಿಯ ಕಾಂಗ್ರೆಸ್ ಮುಖಂಡರು ಹಾಗೂ ವೈದ್ಯರ ಆಪ್ತ ಬಳಗದ ಮಂಜುನಾಥ ನಾಯ್ಕ (ರಾಮನಗರ) ಮತ್ತು ಗಣೇಶ ನಾಯ್ಕ (ಮಾಸ್ತಿಮನೆ) ವಿಷಾದ ವ್ಯಕ್ತಪಡಿಸಿದ್ದಾರೆ.

ಕೊನೆ ಕ್ಷಣದಲ್ಲಿ ಕೈಬಿಟ್ಟದ್ದು ಸರಿಯಲ್ಲ:

ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉತ್ತಮ ಶಿಕ್ಷಣ ಸಂಸ್ಥೆಗಳು, ಶರಾವತಿ ಏತ ನೀರಾವರಿ ಯೋಜನೆ, ಬಂದರುಗಳ ಪುನರುತ್ಥಾನ ಹಾಗೂ ಜಿಲ್ಲೆಯನ್ನು ಪ್ರವಾಸೋದ್ಯಮದ ಹೆಬ್ಬಾಗಿಲನ್ನಾಗಿಸುವ ಕನಸು ಹೊತ್ತು ದಣಿವರಿಯದೆ ದುಡಿಯುತ್ತಿರುವ ನಾಯಕರ ಸಾಮರ್ಥ್ಯವನ್ನು ಹೈಕಮಾಂಡ್ ಗುರುತಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಯಾರದೋ ಒತ್ತಡಕ್ಕೆ ಮಣಿದು ಸಚಿವ ಸ್ಥಾನದಿಂದ ಕೈಬಿಟ್ಟಿರುವುದು ಅವರ ಆತ್ಮಸ್ಥೈರ್ಯಕ್ಕೆ ಕೊಡಲಿಪೆಟ್ಟು ನೀಡಿದಂತಾಗಿದೆ. ಸರ್ಕಾರದ ಈ ನಡೆಯನ್ನು ಉತ್ತರ ಕನ್ನಡದ ಜನತೆ ಎಂದಿಗೂ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

ಪುನಃ ಸಚಿವ ಸ್ಥಾನ ನೀಡಲು ಆಗ್ರಹ:

ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಸಚಿವರಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಮೆಚ್ಚುವ ರೀತಿಯಲ್ಲಿ ಮಂಕಾಳು ವೈದ್ಯರು ಕಾರ್ಯನಿರ್ವಹಿಸಿದ್ದರು. ಅಲ್ಲದೆ ಜಿಲ್ಲಾ ಉಸ್ತುವಾರಿಯಾಗಿ ಸಂಕಷ್ಟದ ಸಂದರ್ಭಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ಜನಮನ್ನಣೆ ಗಳಿಸಿದ್ದರು. ಅವರ ಈ ಸಾಮರ್ಥ್ಯವನ್ನು ಪರಿಗಣಿಸಿ ಅವರಿಗೆ ಪುನಃ ಸಚಿವ ಸ್ಥಾನ ನೀಡಬೇಕೆಂದು ಮುಖಂಡರು ಆಗ್ರಹಿಸಿದ್ದಾರೆ.

About The Author

error: Content is protected !!