

ಸ್ಥಳ ಮಹಜರು, ಜಿಪಿಎಸ್ ಸರ್ವೆ ನಡೆಸಿ ಅರ್ಹ ಅರಣ್ಯವಾಸಿಗಳಿಗೆ ಅಧಿಭೋಗದ ಹಕ್ಕು ನೀಡಲು ಒತ್ತಾಯ

ಮನವಿಗೆ ಸ್ಪಂದಿಸಿ ಕಂದಾಯ, ಅರಣ್ಯ ಹಾಗೂ ಪರಿಶಿಷ್ಟ ಪಂಗಡ ಇಲಾಖೆಗೆ ಮುಖ್ಯ ಕಾರ್ಯದರ್ಶಿಗಳಿಂದ ಸೂಚನೆ

ಕಾರವಾರ: ಅರಣ್ಯ ಭೂಮಿ ಸಾಗುವಳಿದಾರರಿಗೆ ಅಧಿಭೋಗದ ಹಕ್ಕು ನೀಡಲು ಹಾಗೂ ಅರಣ್ಯ ಹಕ್ಕು ಕಾಯ್ದೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ನೀಡಿದ್ದ ಆದೇಶವನ್ನು ತಕ್ಷಣವೇ ಜಾರಿಗೆ ತರಬೇಕು ಮತ್ತು 2005ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರು ಭೂಮಿಯ ಹಕ್ಕಿನಿಂದ ವಂಚಿತರಾಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ತುರ್ತು ಮನವಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವಸತಿ ಮತ್ತು ಜೀವನೋಪಾಯಕ್ಕಾಗಿ 2005ರ ಪೂರ್ವದಿಂದಲೂ ಅರಣ್ಯ ಭೂಮಿಯಲ್ಲಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಬುಡಕಟ್ಟು ಹಾಗೂ ಪಾರಂಪರಿಕ ಅರಣ್ಯವಾಸಿಗಳು ಹಕ್ಕಿನಿಂದ ವಂಚಿತರಾಗಿದ್ದಾರೆ. ಸರ್ಕಾರ ತಿರಸ್ಕರಿಸಿದ ಅರ್ಜಿಗಳನ್ನು ಪುನರ್ ಪರಿಶೀಲಿಸಲು ಮತ್ತು ಮಹಜರು ಪ್ರಕ್ರಿಯೆಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಡಳಿತಕ್ಕೆ ಸೂಚಿಸಿದ್ದರೂ, ಇದುವರೆಗೂ ಅನುಷ್ಠಾನಕ್ಕೆ ತರದಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.


ಪ್ರಮುಖ ಬೇಡಿಕೆಗಳು:
ಉನ್ನತಾಧಿಕಾರ ಸಮಿತಿ ಸಂವಾದ: ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಯಾ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ಪ್ರಮುಖರ ಸಮ್ಮುಖದಲ್ಲಿ ಸಂವಾದ ಸಭೆ ಆಯೋಜಿಸಬೇಕು.
ಸಾರಾಸಗಟು ತಿರಸ್ಕೃತ ಅರ್ಜಿಗಳ ಪರಿಶೀಲನೆ: ಸರ್ಕಾರದ ನಿರ್ದೇಶನದಂತೆ ತಿರಸ್ಕೃತಗೊಂಡಿರುವ ಎಲ್ಲಾ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳನ್ನು ಪುನಃ ಪರಿಶೀಲಿಸಬೇಕು.
ಜಿಪಿಎಸ್ ಸರ್ವೆ ಮತ್ತು ಸ್ಥಳ ಮಹಜರು: ಪ್ರತ್ಯಕ್ಷ ಸಾಗುವಳಿಯ ಜಿಪಿಎಸ್ ಸರ್ವೆ ಹಾಗೂ ಸ್ಥಳದಲ್ಲಿನ ಸಾಂದರ್ಭಿಕ ಸಾಕ್ಷ್ಯಗಳನ್ನು ಮಹಜರು ಪ್ರಕ್ರಿಯೆಯ ಮೂಲಕ ದೃಢೀಕರಿಸಿ, ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗಳ (SDLC) ಮೂಲಕ ಅರ್ಹರಿಗೆ ಅಧಿಭೋಗದ ಹಕ್ಕು ನೀಡಬೇಕು.
ರಾಜ್ಯ ಸಮಿತಿಯ ಮನವಿಗೆ ಸಿಎಸ್ ಸ್ಪಂದನೆ:
ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರ ಮನವಿಗೆ ತಕ್ಷಣ ಸ್ಪಂದಿಸಿರುವ ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ, ಅರಣ್ಯ ಇಲಾಖೆಯ ಕಾರ್ಯದರ್ಶಿಗಳಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಹೋರಾಟ ಸಮಿತಿ ತಿಳಿಸಿದೆ.
ರಾಜ್ಯದ ಪರಿಸ್ಥಿತಿ: ರಾಜ್ಯದಲ್ಲಿ 13-12-2005ಕ್ಕಿಂತ ಮೊದಲು ಅರಣ್ಯ ಭೂಮಿಯನ್ನೇ ನಂಬಿ ಬದುಕುತ್ತಿರುವ ಒಟ್ಟು 2,88,549 ಬುಡಕಟ್ಟು ಹಾಗೂ ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಭಾರಿ ಪ್ರಮಾಣದ 2,60,139 ಅರ್ಜಿಗಳು ಸಾರಾಸಗಟಾಗಿ ತಿರಸ್ಕೃತಗೊಂಡಿದ್ದವು.
ಉತ್ತರ ಕನ್ನಡ ಜಿಲ್ಲೆಯ ಸ್ಥಿತಿ: ಉತ್ತರ ಕನ್ನಡ ಒಂದೇ ಜಿಲ್ಲೆಯಲ್ಲೇ ಸಲ್ಲಿಕೆಯಾಗಿದ್ದ 85,065 ಅರ್ಜಿಗಳ પૈકી 67,226 ಅರ್ಜಿಗಳನ್ನು ಯಾವುದೇ ಸೂಕ್ತ ವಿಚಾರಣೆ ನಡೆಸದೇ ತಿರಸ್ಕರಿಸಲಾಗಿತ್ತು.
ಆತಂಕದಲ್ಲಿ ರೈತರು: ಈ ಅನ್ಯಾಯದ ವಿರುದ್ಧ ಹೋರಾಟ ಸಮಿತಿ ತೀವ್ರ ಪ್ರತಿಭಟನೆ ನಡೆಸಿದ ಫಲವಾಗಿ ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಯು 2019 ಮತ್ತು 2025ರಲ್ಲಿ ಅರ್ಜಿಗಳ ಪುನರಪರಿಶೀಲನೆಗೆ ಆದೇಶಿಸಿತ್ತು. ಆದರೆ, ಸ್ಥಳ ಮಹಜರು ಸೇರಿದಂತೆ ಪರಿಶೀಲನಾ ಕಾರ್ಯಗಳು ಇನ್ನೂ ಭರದಿಂದ ಆರಂಭವಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
About The Author




More Stories
ಕಸ್ತೂರಿ ರಂಗನ್ ವರದಿ ಅಧಿಸೂಚನೆಗೆ ತೀವ್ರ ವಿರೋಧ: ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಆಕ್ರೋಶ.
ಜನಜಾಗೃತಿ ವೇದಿಕೆ ಜಿಲ್ಲಾ ನೂತನ ಸಂಘಟನಾ ಅಧ್ಯಕ್ಷರಾಗಿ ವಾಮನ ಸುಬ್ರಾಯ ನಾಯ್ಕ್ ಸರ್ವಾನುಮತದಿಂದ ಆಯ್ಕೆ.
ಮಂತ್ರಿ ನಾಗೇಂದ್ರ ರಾಜೀನಾಮೆ ನೀಡಲೇಬೇಕು: ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಿರುಸಿನ ಹೋರಾಟ!