August 23, 2026

ವಾಹನದ ಇಂಧನಕ್ಕಿರುವ ಕಾಳಜಿ, ನಿಮ್ಮ ಆಹಾರಕ್ಕೂ ಇರಲಿ: ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ

ಜಠರಾಗ್ನಿ ಶರೀರದ ಪ್ರತಿಬಿಂಬ; ಅಗ್ನಿ ಕೆಟ್ಟರೆ ರೋಗ, ಸರಿಯಾಗಿದ್ದರೆ ದೀರ್ಘಾಯುಷ್ಯ

ದೇಹವೆಂಬ ವಾಹನ ಒಮ್ಮೆ ಕೆಟ್ಟರೆ ಮತ್ತೊಂದು ಸಿಗದು: ಶ್ರೀಗಳ ಕಳಕಳಿ

    ಗೋಕರ್ಣ (ಆಗಸ್ಟ್ 12): “ಅಗ್ನಿಯ ಪ್ರತಿಬಿಂಬವೇ ನಮ್ಮ ಶರೀರ. ಶರೀರದಲ್ಲಿ ಜಠರಾಗ್ನಿ ಶಾಂತವಾದರೆ ಮರಣ, ಅಗ್ನಿ ಕೆಟ್ಟರೆ ರೋಗ ಹಾಗೂ ಅಗ್ನಿ ಸರಿಯಾಗಿದ್ದರೆ ನಿರೋಗಿಯಾಗಿ ದೀರ್ಘಾಯುಷಿಯಾಗಿ ಬಾಳಲು ಸಾಧ್ಯ. ಆದ್ದರಿಂದ ವಾಹನಕ್ಕೆ ಇಂಧನ ತುಂಬಿಸುವಾಗ ವಹಿಸುವ ಜಾಗ್ರತೆಯನ್ನು ಆಹಾರ ಸ್ವೀಕರಿಸುವಾಗಲೂ ವಹಿಸಬೇಕು,” ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

    ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಆಗಸ್ಟ್ 12ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ‘ಜಠರಾಗ್ನಿ’ ಕುರಿತು ಶ್ರೀಗಳು ಪ್ರವಚನ ಅನುಗ್ರಹಿಸುತ್ತಿದ್ದರು.

    “ವಾಹನಕ್ಕೆ ಇಂಧನ ಶಕ್ತಿ ನೀಡುವಂತೆ, ದೇಹಕ್ಕೆ ಆಹಾರವೇ ಇಂಧನ. ಆದರೆ ವಾಹನದಲ್ಲಿ ಇಂಧನ ಕೇವಲ ಮಾಧ್ಯಮ, ದೇಹದಲ್ಲಿ ಅದು ನಮ್ಮೊಳಗೆ ನಾವೇ ಆಗಿ ಪರಿವರ್ತಿತವಾಗುತ್ತದೆ. ವಾಹನ ನಿಂತರೆ ಮತ್ತೆ ಚಾಲನೆ ಮಾಡಬಹುದು, ಆದರೆ ದೇಹದ ಜಠರಾಗ್ನಿ ಸ್ಥಬ್ಧವಾದರೆ ಪುನಃ ಆರಂಭಿಸಲು ಸಾಧ್ಯವಿಲ್ಲ. ಸರಿಯಾದ ಆಹಾರವೆಂಬ ಇಂಧನವನ್ನು ದೇಹಕ್ಕೆ ನೀಡಿದಾಗ, ಇಂದಿನ ವಿಜ್ಞಾನಕ್ಕೂ ತಲುಪಲಾಗದ ಅಂತರಂಗದ ಲೋಕಗಳನ್ನು ತಿಳಿಯಬಹುದು,” ಎಂದು ಆಹಾರದ ಮಹತ್ವವನ್ನು ವಿವರಿಸಿದರು.

    “ದೇಹವು ಆರೋಗ್ಯವಾಗಿದ್ದರೆ ನೂರು ವಾಹನಗಳನ್ನು ಕೊಳ್ಳಬಹುದು. ಆದರೆ ದೇಹವೆಂಬ ವಾಹನ ಕೆಟ್ಟು ನಿಂತರೆ ಸರಿಪಡಿಸುವುದು ಬಹಳ ಕಷ್ಟ. ಆದ್ದರಿಂದ ಜಠರಾಗ್ನಿಯ ವಿಚಾರದಲ್ಲಿ ಅತಿಯಾದ ಕಾಳಜಿ ಅತ್ಯಗತ್ಯ.”ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

    ಗುರುಭಿಕ್ಷಾ ಸೇವೆ: ಕುಮಟಾ ಹವ್ಯಕ ಮಂಡಲದ ಧಾರೇಶ್ವರ, ವಾಲಗಳ್ಳಿ, ಕೆಕ್ಕಾರು, ಕುಮಟಾ ಹಾಗೂ ಕಾರವಾರ-ಅಂಕೋಲಾ ಹವ್ಯಕ ವಲಯಗಳ ಪರವಾಗಿ ನಾಗರಾಜ ನಾರಾಯಣ ಜೋಶಿ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು.

    ಉಪಸ್ಥಿತ ಗಣ್ಯರು: ಕಾರ್ಯಕ್ರಮದಲ್ಲಿ ಎಸ್. ವಿ. ಹೆಗಡೆ ಭದ್ರನ್, ಕೃಷ್ಣಾನಂದ ಹೊಳೆಗದ್ದೆ, ಜಿ. ಎಸ್. ಹೆಗಡೆ ಕುಮಟಾ, ಸ್ವಾತಿ ಭಾಗ್ವತ್, ವಾದಿರಾಜ ಸಾಮಗ ಹಾಗೂ ದಿನ ಪ್ರಧಾನರಾದ ಪರಮೇಶ್ವರ ನಾರಾಯಣ ಭಟ್ಟ ದಂಪತಿಗಳು ಉಪಸ್ಥಿತರಿದ್ದರು.

    About The Author

    error: Content is protected !!