

ಹೊನ್ನಾವರ: ತಾಲೂಕಿನ ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ಒಂದಾದ ನೀಲಗೋಡ ಯಕ್ಷಚೌಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ಅಮಾವಾಸ್ಯೆಯ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾ-ಭಕ್ತಿಗಳಿಂದ ನೆರವೇರಿದವು.

ಶರಾವತಿ ನದಿ ತೀರದಲ್ಲಿ ನೆಲೆನಿಂತು, ನಂಬಿ ಬರುವ ಭಕ್ತರ ಸಕಲ ಇಷ್ಟಾರ್ಥಗಳನ್ನು ಸಿದ್ಧಿಸುವ ದೇವಿ ಎಂದೇ ಪ್ರಸಿದ್ಧವಾಗಿರುವ ನೀಲಗೋಡ ಯಕ್ಷಚೌಡೇಶ್ವರಿ ದೇವಿಗೆ ಅಮಾವಾಸ್ಯೆಯ ಅಂಗವಾಗಿ ವಿವಿಧ ಬಗೆಯ ಪುಷ್ಪಗಳಿಂದ ಮನಮೋಹಕ ಅಲಂಕಾರ ಮಾಡಲಾಗಿತ್ತು. ಪ್ರತಿ ಅಮಾವಾಸ್ಯೆಯಂತೆ ಈ ಬಾರಿಯೂ ನವಚಂಡಿಕಾ ಹವನ ಸೇರಿದಂತೆ ವಿವಿಧ ಪೂಜಾ ಪುರಸ್ಕಾರಗಳು ಸಾಂಗವಾಗಿ ಜರುಗಿದವು.

ತ್ಯಾಗ ಮತ್ತು ತಪಸ್ಸಿನಿಂದ ಸಿದ್ಧಿ ಸಾಧ್ಯ: ಶ್ರೀ ಯೋಗೀಶ್ವರ ಸ್ವಾಮೀಜಿ
ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಮದ್ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಯೋಗೀಶ್ವರ ಸ್ವಾಮೀಜಿ,

“ಮನುಷ್ಯರು ಸಾಮಾನ್ಯ ಮೋಹ-ಲಾಲಸೆಗಳಿಗೆ ಒಳಗಾಗುತ್ತಾರೆ. ಆದರೆ ತ್ಯಾಗ ಮತ್ತು ತಪಸ್ಸನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಿದ್ಧಿ ಲಭಿಸಲಿದೆ. ನಾವು ಯಾವುದೇ ಕೆಲಸವನ್ನು ಮಾಡುವಾಗಲೂ ಶ್ರದ್ಧೆಯಿಂದ ಮಾಡಿದರೆ ಸೂಕ್ತ ಫಲ ದೊರೆಯುತ್ತದೆ. ಇಂದಿನ ದಿನಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರವೂ ಅತ್ಯಂತ ಮುಖ್ಯವಾಗಿದೆ. ದೇವಾಲಯದಂತಹ ಶ್ರದ್ಧಾಕೇಂದ್ರದಲ್ಲಿ ಸಿಗುವ ಮಾನಸಿಕ ನೆಮ್ಮದಿ ವಿಶ್ವದ ಬೇರೆ ಯಾವ ಸ್ಥಳದಲ್ಲೂ ಸಿಗುವುದಿಲ್ಲ. ಧಾರ್ಮಿಕ ಆಚರಣೆಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಾಗ ಇಷ್ಟಾರ್ಥಗಳು ನೆರವೇರುವುದರ ಜೊತೆಗೆ ಮನಸ್ಸಿಗೂ ಅಪಾರ ಶಾಂತಿ ಲಭಿಸುತ್ತದೆ,” ಎಂದರು.


ಆಶೀರ್ವಚನದ ನಂತರ ಶ್ರೀ ಗುರುಗಳಿಂದ ಭಕ್ತರಿಗೆ ಮಂತ್ರಾಕ್ಷತೆ ನೀಡಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಮಹಾದೇವಸ್ವಾಮಿ ಅವರು ತೀರ್ಥ-ಸ್ನಾನ/ಪ್ರಸಾದದ ಕಾರ್ಯಗಳನ್ನು ನೆರವೇರಿಸಿಕೊಟ್ಟರು.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳು ಉಡಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
ಧಾರ್ಮಿಕ ಕಾರ್ಯಕ್ರಮಗಳ ಸಂಪನ್ನದ ನಂತರ ಆಗಮಿಸಿದ ಎಲ್ಲಾ ಭಕ್ತರಿಗೂ ಅನ್ನಪ್ರಸಾದ ವಿತರಣೆ ನೆರವೇರಿತು.
About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.