August 25, 2026

ಮದ್ದಲೆಯಲ್ಲಿ ನಂಬರ್ ೧ ಶಂಕರ ಭಾಗವತ್‌: ಉಮಾಕಾಂತ ಭಟ್ಟ ಕೆರೇಕೈ

ಶಿರಸಿ: ಯಕ್ಷಗಾನ ಮದ್ದಲೆ ವಾದನ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ತಮ್ಮದೇ ಆದ ಛಾಪು ಮೂಡಿಸಿರುವ ಶಂಕರ ಭಾಗವತ್ ಅವರು ಮದ್ದಲೆ ವಾದನದಲ್ಲಿ ‘ನಂಬರ್‌ ೧’ ಆಗಿದ್ದಾರೆ ಎಂದು ವಿದ್ಯಾ ವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಪ್ರಶಂಸಿಸಿದರು. ನಗರದ ರಂಗಧಾಮದ ನಮ್ಮದಿ ಆವರಣದಲ್ಲಿ ನಾದಶಂಕರ ಟ್ರಸ್ಟ್ ಆಯೋಜಿಸಿದ್ದ ಕೂಚಿಪುಡಿ ಹಾಗೂ ಯಕ್ಷಗಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಕ್ಷೇತ್ರದಲ್ಲಿ 30 ವರ್ಷಗಳಿಂದ ಅಗ್ರಸ್ಥಾನ ಕಾಯ್ದುಕೊಳ್ಳುವುದು ಸುಲಭವಲ್ಲ. ತಮ್ಮ ವಿಶಿಷ್ಟ ಶೈಲಿ ಮತ್ತು ನಾದದಿಂದ ಶಂಕರ ಭಾಗವತ್ ಯಕ್ಷಗಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಕೆರೇಕೈ ಹಾರೈಸಿದರು.

ಸ್ಥಳೀಯ ಕಲೆಗೆ ಪ್ರೋತ್ಸಾಹ: ಯಕ್ಷಗಾನ ಮತ್ತು ಶಾಸ್ತ್ರೀಯ ನೃತ್ಯವನ್ನು ಒಂದೇ ವೇದಿಕೆಯಲ್ಲಿ ತಂದು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುತ್ತಿರುವ ನಾದಶಂಕರ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ ಎಂದು ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹಿರೇಕೈ ಹೇಳಿದರು.

ಇದೇ ಸಂದರ್ಭದಲ್ಲಿ ಅಶ್ವಿನಿ ಗಿರೀಶ ಭಟ್ಟ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ವೈಭವ: ಗುರು ಅಶ್ವಿನಿ ಭಟ್ಟ ಹಾಗೂ ಶಿಷ್ಯರಾದ ಪೂರ್ವಿ ಡಿ. ಭಾಗ್ವತ್ ಮತ್ತು ವಘೀಶಾ ಸತೀಶಕುಮಾರ್ ಅವರಿಂದ ಕೂಚಿಪುಡಿ ನೃತ್ಯ ಪ್ರದರ್ಶನ ನಡೆಯಿತು. ನಂತರ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಂಡಿತು.

    ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ನಂದನ ಹೆಗಡೆ, ಶಂಕರ ಭಾಗವತ್ ಯಲ್ಲಾಪುರ, ವಿಘ್ನೇಶ್ವರ ಗೌಡ ಹಾಗೂ ಮುಮ್ಮೇಳದಲ್ಲಿ ನಿರಂಜನ ಜಾಗನಳ್ಳಿ, ಪ್ರವೀಣ ತಟ್ಟಿಸರ, ನಿತಿನ್ ಹೆಗಡೆ, ದೀಪಕ್ ಕುಂಕಿ ಮುಂತಾದವರು ಭಾಗವಹಿಸಿದ್ದರು.

    ಕಾರ್ಯಕ್ರಮವನ್ನು ಶಂಕರ ಭಾಗವತ್ ಸ್ವಾಗತಿಸಿ, ಸುಜಾತ ದಂಟಕಲ್ ನಿರ್ವಹಿಸಿದರು. ವೈಶಾಲಿ ವಿ.ಪಿ. ಹೆಗಡೆ, ದರ್ಶನ್ ಭಾಗವತ್, ಶಿಲ್ಪಾ‌ ಭಾಗ್ವತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    About The Author

    error: Content is protected !!