

ಶಿರಸಿ: ಅವೈಜ್ಞಾನಿಕ ಕಸ್ತೂರಿ ರಂಗನ್ 7ನೇ ಅಧಿಸೂಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಜಿಲ್ಲಾದ್ಯಂತ ಲಕ್ಷಕ್ಕೂ ಮಿಕ್ಕಿ ಆಕ್ಷೇಪಣಾ ಪತ್ರಗಳನ್ನು ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಗೆ ಉಚಿತವಾಗಿ ಸಲ್ಲಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ತೀರ್ಮಾನಿಸಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.


ಆಗಸ್ಟ್ 18 ರಂದು ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣಾ ಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯ 567 ಹಳ್ಳಿಗಳು ಭಾಗಿ:
ಪಶ್ಚಿಮ ಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಕಸ್ತೂರಿ ರಂಗನ್ ವರದಿಯಂತೆ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾದ ಪಟ್ಟಿಯಲ್ಲಿ ಕರ್ನಾಟಕದ ವಿವಿಧ 10 ಜಿಲ್ಲೆಗಳ ಒಟ್ಟು 1,502 ಹಳ್ಳಿಗಳನ್ನು ಸೇರ್ಪಡೆಗೊಳಿಸಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳಿಂದ ಅತಿ ಹೆಚ್ಚು ಅಂದರೆ 567 ಹಳ್ಳಿಗಳು ಸೇರ್ಪಡೆಗೊಂಡಿವೆ ಎಂದು ರವೀಂದ್ರ ನಾಯ್ಕ ವಿವರಿಸಿದರು.

ತಾಲೂಕುವಾರು ಪಟ್ಟಿಗೆ ಸೇರಿದ ಹಳ್ಳಿಗಳ ವಿವರ:


- ಶಿರಸಿ: 114 ಹಳ್ಳಿಗಳು
- ಸಿದ್ದಾಪುರ: 100 ಹಳ್ಳಿಗಳು
- ಜೋಯಿಡಾ: 88 ಹಳ್ಳಿಗಳು
- ಯಲ್ಲಾಪುರ: 84 ಹಳ್ಳಿಗಳು
- ಹೊನ್ನಾವರ: 42 ಹಳ್ಳಿಗಳು
- ಕುಮಟಾ: 41 ಹಳ್ಳಿಗಳು
- ಅಂಕೋಲ: 38 ಹಳ್ಳಿಗಳು
- ಕಾರವಾರ: 35 ಹಳ್ಳಿಗಳು
- ಭಟ್ಕಳ: 25 ಹಳ್ಳಿಗಳು
ಉಪಗ್ರಹ ಸರ್ವೆಗೆ ತೀವ್ರ ಆಕ್ಷೇಪ – ಮಾನವ ಹಕ್ಕುಗಳ ಉಲ್ಲಂಘನೆ:
ಸ್ಯಾಟಲೈಟ್ (ಉಪಗ್ರಹ) ಆಧಾರಿತ ಸರ್ವೆ ನಡೆಸಿರುವುದರಿಂದ ಅಡಿಕೆ, ತೆಂಗಿನ ತೋಟ ಹಾಗೂ ಇನ್ನಿತರ ಕೃಷಿ-ತೋಟಗಾರಿಕೆ ಬೆಳೆಗಳಿರುವ ಹಸಿರು ಪ್ರದೇಶವನ್ನು ಸಹ ಅರಣ್ಯ ಪ್ರದೇಶವೆಂದು ಪರಿಗಣಿಸಿರುವುದು ನೈಸರ್ಗಿಕ ನಿಯಮಗಳಿಗೆ ವಿರುದ್ಧವಾಗಿದೆ ಎಂದು ರವೀಂದ್ರ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ನೈಸರ್ಗಿಕ ಕಾನೂನಿನ ಪ್ರಮಾಣ ಗುರುತಿಸದೇ, ಭೌಗೋಳಿಕ ಕ್ಷೇತ್ರ ವಿಂಗಡಣೆಯಲ್ಲಿ ತಾಂತ್ರಿಕ ವಿಧಾನ ಅನುಸರಿಸದೇ ಪ್ರಕಟಿಸಲಾಗಿದೆ.
ಘೋಷಿತ ಹಳ್ಳಿಗಳ ನಿರ್ದಿಷ್ಟ ಸರ್ವೇ ನಂಬರ್ ಪ್ರದೇಶಗಳನ್ನು ವ್ಯಾಖ್ಯಾನಿಸಿಲ್ಲ.
ಘೋಷಿತ ಪ್ರದೇಶದಲ್ಲಿ ನೈಸರ್ಗಿಕ ಹಾಗೂ ಮಾನವ ಮೂಲಸೌಕರ್ಯಗಳಾದ ನೀರು, ರಸ್ತೆ ಅಭಿವೃದ್ಧಿ ಮುಂತಾದ ಪಾರಂಪರಿಕ ನಾಗರಿಕ ಸೌಕರ್ಯಗಳಿಗೆ ನಿರ್ಬಂಧ ವಿಧಿಸುವುದರಿಂದ ಸಾರ್ವಜನಿಕರ ಜೀವನ ಹಕ್ಕು ಮತ್ತು ಮಾನವ ಹಕ್ಕುಗಳ ತೀವ್ರ ಉಲ್ಲಂಘನೆಯಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ರಾಜು ನರೇಬೈಲ್, ವಿನೋಧ ಎಮ್ ಗೌಡ ತಡಾಗುಂಡಿ, ರಮೇಶ್ ನಾಯ್ಕು ದೊಡ್ಡಳ್ಳಿ, ಜೀತೇಂದ್ರ ಕೆ ನರೇಬೈಲ್, ಯಶೋಧ ಬಿ ನಾಟೋರು ಹಾಗೂ ಉಮೇಶ ನಾಯ್ಕು ಶೇಲೂರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
About The Author




More Stories
ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ಸೆ.5ಕ್ಕೆ ಶಿರಸಿಯಲ್ಲಿ ಆಕ್ಷೇಪಣಾ ಪತ್ರ ಸಲ್ಲಿಕೆ – ರವೀಂದ್ರ ನಾಯ್ಕ
‘ಕಾಪ್ ಆಫ್ ಮಂತ್’ ಪ್ರಶಸ್ತಿಗೆ ಶಂಕರಮೂರ್ತಿ ನಾಯ್ಕ ಆಯ್ಕೆ.
11 ವರ್ಷದ ಪೋರ ರಕ್ಷಿತ್ಗೆ ‘ಥಲಸೇಮಿಯಾ ಮೇಜರ್’ ಕಾಯಿಲೆ: ಜೀವ ಉಳಿಸಲು 45 ಲಕ್ಷ ರೂ.ಗಳ ತುರ್ತು ಅಗತ್ಯ – ನೆರವಿಗೆ ದಾನಿಗಳಲ್ಲಿ ಕಳಕಳಿ ಮನವಿ