August 21, 2026

ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ಸೆ.5ಕ್ಕೆ ಶಿರಸಿಯಲ್ಲಿ ಆಕ್ಷೇಪಣಾ ಪತ್ರ ಸಲ್ಲಿಕೆ – ರವೀಂದ್ರ ನಾಯ್ಕ

ಶಿರಸಿ: ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾದ ಕಸ್ತೂರಿ ರಂಗನ್ ವರದಿಯ 7ನೇ ಅಧಿಸೂಚನೆಗೆ ವ್ಯಾಪಕ ಆಕ್ಷೇಪಣೆ ಸಲ್ಲಿಸುವ ಹಿನ್ನೆಲೆಯಲ್ಲಿ, ವರದಿ ವಿರೋಧಿಸಿ ಘಟ್ಟದ ಮೇಲಿನ ತಾಲೂಕುಗಳ ಜನರಿಂದ ಬೃಹತ್ ರ್ಯಾಲಿ ನಡೆಸಿ ಸೆಪ್ಟೆಂಬರ್ 5ರಂದು ಶಿರಸಿಯಲ್ಲಿ ಆಕ್ಷೇಪಣಾ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಶಿರಸಿಯ ವೇದಿಕೆ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತೀವ್ರವಾಗಿ ವಿರೋಧಿಸಿ ಆಕ್ಷೇಪಣಾ ಪತ್ರ ಸಲ್ಲಿಸಲು ತೀರ್ಮಾನಿಸಲಾಯಿತು. ಪಶ್ಚಿಮ ಘಟ್ಟ ಪ್ರದೇಶವನ್ನು ರಕ್ಷಿಸಲು ಹಾಗೂ ಸಂರಕ್ಷಿಸಲು ಈಗಾಗಲೇ ಕಾಯ್ದೆ ಕಾನೂನುಗಳು ಅಸ್ತಿತ್ವದಲ್ಲಿರುವುದರಿಂದ, ಹೊಸ ಮಾನದಂಡದ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಸ್ತೂರಿ ರಂಗನ್ ವರದಿ ಜಾರಿಯ ವಿರೋಧ ಹಾಗೂ ಆಕ್ಷೇಪಣೆಗೆ ಇರುವ ಪ್ರಮುಖ ಕಾರಣಗಳ ವಿವರಗಳನ್ನೊಳಗೊಂಡ ಒಂದು ಲಕ್ಷ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲು ನಿರ್ಧರಿಸಲಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.

ಕಸ್ತೂರಿ ರಂಗನ್ ವರದಿ 7ನೇ ಅಧಿಸೂಚನೆಯಲ್ಲಿ ಕರ್ನಾಟಕದ 10 ಜಿಲ್ಲೆಗಳ 32 ತಾಲೂಕುಗಳ ಒಟ್ಟು 1,502 ಹಳ್ಳಿಗಳನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ.

ಪ್ರಥಮ ಸ್ಥಾನ: ತೀರ್ಥಹಳ್ಳಿ ತಾಲೂಕು (138 ಹಳ್ಳಿಗಳು)

ದ್ವಿತೀಯ ಸ್ಥಾನ: ಹೊಸನಗರ ತಾಲೂಕು (118 ಹಳ್ಳಿಗಳು)

ತೃತೀಯ ಸ್ಥಾನ: ಶಿರಸಿ ಮತ್ತು ಸಾಗರ ತಾಲೂಕುಗಳು (ತಲಾ 114 ಅತಿ ಸೂಕ್ಷ್ಮ ಹಳ್ಳಿಗಳು)

ಶಿರಸಿ, ಸಿದ್ಧಾಪುರ, ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಸಾರ್ವಜನಿಕರು ಸೆಪ್ಟೆಂಬರ್ 5ರ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ನಾಗರಾಜ ದೇವಸ್ಥಳಿ, ರಾಜು ನರೇಬೈಲ್, ಚಂದ್ರ ಶಾನಭಾಗ, ಚಂದ್ರು ನಾಯ್ಕ, ಕಿರಣ ಮುರಾರಿ ದೇವನಳ್ಳಿ, ರಫೀಕ ಗೌಡಳ್ಳಿ, ಪರಮೇಶ್ವರ ವಾನಳ್ಳಿ, ಜಯಶ್ರೀ ಪಟಗಾರ, ಕಲ್ಪನಾ ನರೇಬೈಲ್, ಅಬ್ದುಲ್ ಮುನಾಫ್, ಪಂಪಾವತಿ, ಯಶವಂತ ಬಂಡಲ್, ಸುರೇಶ ಗೌಡ ಗುಡ್ನಾಪುರ, ಲಕ್ಷ್ಮಣ ಕೆ. ಗೌಡ ಗುಡ್ನಾಪುರ, ಗೋಪಾಲ ಜಿ. ನಾಯ್ಕ, ಫಕೀರಪ್ಪ, ಹುಲಿಯಾ ಗೌಡ, ಪ್ರಶಾಂತ್ ನಾಯ್ಕ ಹಾಗೂ ಗಣಪತಿ ಮೊಗಳ್ಳಿ ಮುಂತಾದವರು ಉಪಸ್ಥಿತರಿದ್ದರು.

About The Author

error: Content is protected !!