September 20, 2026

ಕಸ್ತೂರಿ ರಂಗನ್ ವರದಿ 7ನೇ ಕರಡು ಅಧಿಸೂಚನೆ ವಿರೋಧಿಸಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿಯವರಿಗೆ ಸಿಪಿಐ(ಎಂ) ಮನವಿ

ಡಾ. ಕಸ್ತೂರಿ ರಂಗನ್ ವರದಿ ಅನುಷ್ಠಾನದ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) – ಸಿಪಿಐ(ಎಂ) ರಾಜ್ಯ ನಿಯೋಗವು 2026ರ ಸೆಪ್ಟೆಂಬರ್ 15ರಂದು ರಾಜ್ಯದ ಅರಣ್ಯ ಮತ್ತು ಪರಿಸರ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿಯವರನ್ನು ಭೇಟಿಯಾಗಿ ಸಕಾರಾತ್ಮಕ ಚರ್ಚೆ ನಡೆಸಿ, ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿತು.

ಸಿಪಿಐ(ಎಂ) ನಿಯೋಗ ಮಂಡಿಸಿದ ಪ್ರಮುಖ 4 ಸಲಹೆಗಳು ಹಾಗೂ ಆಗ್ರಹಗಳು:

ಕೇಂದ್ರದ ಸಮಿತಿಗೆ ಕಾಲಮಿತಿ ನಿಗದಿ ಮತ್ತು ಸಾರ್ವಜನಿಕ ಅಭಿಪ್ರಾಯ: 2022ರಲ್ಲಿ ಕೇಂದ್ರ ಸರ್ಕಾರ ರಚಿಸಿದ ವಿಶೇಷ ಸಮಿತಿಯು ಇಂದಿಗೂ ತನ್ನ ಅಂತಿಮ ವರದಿಯನ್ನು ನೀಡದೆ ಹಳೆಯ ವಾಕ್ಯಗಳನ್ನೇ ಮರುಮುದ್ರಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಯಿತು. ಈ ಸಮಿತಿಯು ತಕ್ಷಣವೇ ನಿಗದಿತ ಕಾಲಮಿತಿಯೊಳಗೆ ವರದಿ ಸಲ್ಲಿಸುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು ಹಾಗೂ ವರದಿ ಬಂದ ನಂತರ ಸಾರ್ವಜನಿಕರ ಮುಕ್ತ ಅಭಿಪ್ರಾಯ ಪಡೆಯಬೇಕು.

ರಾಜ್ಯಮಟ್ಟದ ತಜ್ಞರ ಸಮಿತಿ ರಚನೆ: ಪರಿಸರ ಸೂಕ್ಷ್ಮ ಪ್ರದೇಶಗಳನ್ನು (ESA) ವೈಜ್ಞಾನಿಕವಾಗಿ ಗುರುತಿಸಲು ಹಾಗೂ ಜನ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಪರ್ಯಾಯಗಳನ್ನು ಸೂಚಿಸಲು ಕೇರಳ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ತಜ್ಞರ ಸಮಿತಿಯನ್ನು ರಚಿಸಿ ನೈಜ ವಾಸ್ತವಿಕ ಅಧ್ಯಯನ ನಡೆಸಬೇಕು.

ಅವೈಜ್ಞಾನಿಕ ಚಟುವಟಿಕೆಗಳ ನಿಷೇಧ: ಪಶ್ಚಿಮ ಘಟ್ಟಗಳಲ್ಲಿ ಭಾರೀ ಗಣಿಗಾರಿಕೆ, ಅಂದಾದುಂದಿ ಮರಳು ಸಾಗಾಣಿಕೆ ಮತ್ತು ರೆಸಾರ್ಟ್ ನಿರ್ಮಾಣಗಳಂತಹ ವಿನಾಶಕಾರಿ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಅದೇ ವೇಳೆ, ಪರಿಸರ ನಾಶಕ್ಕೆ ಸ್ಥಳೀಯ ಅರಣ್ಯವಾಸಿಗಳೇ ಕಾರಣ ಎಂಬ ದೃಷ್ಟಿಕೋನವನ್ನು ಕೈಬಿಡಬೇಕು.

ಅರಣ್ಯವಾಸಿಗಳ ಹಾಗೂ ಬುಡಕಟ್ಟು ಜನಸಮುದಾಯಗಳ ಹಿತರಕ್ಷಣೆ: ಅರಣ್ಯ ಭೂಮಿಯಲ್ಲಿ ಕೃಷಿ ಮತ್ತು ವಸತಿ ಮಾಡಿಕೊಂಡಿರುವವರನ್ನು ಹಾಗೂ ಘೋಷಿತವಲ್ಲದ ಬುಡಕಟ್ಟು ಜನರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಮೂಲಭೂತ ಸೌಕರ್ಯಗಳು (ರಸ್ತೆ, ಶಿಕ್ಷಣ, ಮೇವು ಇತ್ಯಾದಿ) ಹಾಗೂ ಅರಣ್ಯ ಉತ್ಪನ್ನ ಬಳಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

    ನಿಯೋಗದಲ್ಲಿದ್ದ ಪ್ರಮುಖರು: ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ, ಉತ್ತರ ಕನ್ನಡ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್, ಕೊಡಗು ಜಿಲ್ಲಾ ಮುಖಂಡ ಡಾ. ದುರ್ಗಾಪ್ರಸಾದ್, ಆದಿವಾಸಿ ಹಕ್ಕುಗಳ ಸಮಿತಿಯ ಡಾ. ಗುರುಶಾಂತ್, ಶ್ರೀಧರ ನಾಡಾ, ರಾಜ್ಯ ಸಮಿತಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಜೆ. ಜಯರಾಮ, ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಹಾಗೂ ಸಾಬು ವಿರಾಜಪೇಟೆ ಅವರು ಭಾಗವಹಿಸಿದ್ದರು.

    ಸಚಿವರು ಈ ಎಲ್ಲಾ ವಿಷಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಾತುಕತೆ ನಡೆಸಿದರು.

    About The Author

    error: Content is protected !!