October 21, 2026

‘ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು’: ರಾಜ್ಯ ಪ್ರಶಸ್ತಿ ಪುರಸ್ಕೃತೆ ಮಮತಾ ನಾಯ್ಕ್‌ಗೆ ಸನ್ಮಾನ

ಕುಮಟಾ/ಹೊನ್ನಾವರ: ಉತ್ತಮ ಶಿಕ್ಷಕರು ಮಾತ್ರ ಸಮಾಜದಲ್ಲಿ ಉನ್ನತ ಗೌರವಕ್ಕೆ ಭಾಜನರಾಗಲು ಸಾಧ್ಯ. ಪ್ರಶಸ್ತಿಯ ಗೌರವ ಹೆಚ್ಚಿಸುವಲ್ಲಿ ಶಿಕ್ಷಕರು ನಿರ್ವಹಿಸುವ ಕಾರ್ಯ ಸಾಧನೆಯೇ ಸಾಕ್ಷಿ ಎಂದು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಈಶ್ವರ ನಾಯ್ಕ ಹೇಳಿದರು.

ಜಿಲ್ಲಾ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು’ ಕಾರ್ಯಕ್ರಮದಡಿ, ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯಾಧ್ಯಾಪಕಿ ಮಮತಾ ನಾಯ್ಕ ಅವರನ್ನು ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ಈಶ್ವರ ನಾಯ್ಕ (ನಿವೃತ್ತ ನಿರ್ದೇಶಕರು): “ಪ್ರೌಢಶಾಲಾ ಮುಖ್ಯಾಧ್ಯಾಪಕರ ಹುದ್ದೆಯು ಸವಾಲುಗಳಿಂದ ಕೂಡಿದ್ದು, ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದಾಗ ಮಾತ್ರ ರಾಜ್ಯ ಪ್ರಶಸ್ತಿ ಹುಡುಕಿಕೊಂಡು ಬರುತ್ತದೆ.”

ಪಿ.ಆರ್. ನಾಯ್ಕ (ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ): “ಅಘನಾಶಿನಿಯಂತಹ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಕಳೆದ ಆರು ವರ್ಷಗಳಿಂದ ಸತತವಾಗಿ 100% ಫಲಿತಾಂಶ ತಂದುಕೊಟ್ಟಿರುವುದು ಮಮತಾ ನಾಯ್ಕ್ ಅವರ ಕಾರ್ಯದಕ್ಷತೆಗೆ ಸಾಕ್ಷಿ.”

ಸಾಹಿತಿ ರವೀಂದ್ರ ಭಟ್ ಸೂರಿ: “ಶಾಲೆಯ ಅಭಿವೃದ್ಧಿಯ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಮತಾ ನಾಯ್ಕ್ ಅವರ ಕರ್ತವ್ಯಬದ್ಧತೆ ಮಾದರಿಯಾಗಿದೆ.”

ಎಂ.ಜಿ. ನಾಯ್ಕ ಹಾಗೂ ಸುದೀಶ ನಾಯ್ಕ: ಸಾಹಿತ್ಯ ಪರಿಷತ್ತು ಸಾಧಕರ ಮನೆಯಂಗಳದಲ್ಲೇ ಸನ್ಮಾನಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮಮತಾ ಅವರ ಸ್ನೇಹಪರ ಗುಣ ಹಾಗೂ ಕಾಳಜಿ ಇತರರಿಗೆ ಪ್ರೇರಣೆ ಎಂದರು.

ಸನ್ಮಾನ ಹಾಗೂ ಅಭಿನಂದನೆ:

ಸನ್ಮಾನ ಸ್ವೀಕರಿಸಿದ ಮಮತಾ ನಾಯ್ಕ ಹಾಗೂ ಪ್ರಮೋದ ನಾಯ್ಕ ಅವರು ಕಸಾಪ ಹಾಗೂ ಆಗಮಿಸಿದ ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶೈಲಾ ಗುನಗಿ ಅವರನ್ನು ಮಮತಾ ನಾಯ್ಕ ದಂಪತಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಕುಮಟಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಪ್ರಮುಖರಾದ ಸುರೇಶ ನಾಯ್ಕ, ಪ್ರದೀಪ ನಾಯಕ, ಎಂ.ಎಂ. ನಾಯ್ಕ, ವಿಜಯ ಗುನಗ ಉಪಸ್ಥಿತರಿದ್ದರು. ಕಸಾಪ ಕೋಶಾಧ್ಯಕ್ಷ ಯೋಗೇಶ ಪಟಗಾರ ಸ್ವಾಗತಿಸಿ, ಪಿ.ಎಂ. ಮುಕ್ರಿ ವಂದಿಸಿದರು. ನಾಗರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

    About The Author

    error: Content is protected !!