

ಮಿರ್ಜಾನ್ (ಕುಮಟಾ): ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ-ಉತ್ತರ ಕನ್ನಡ ಶಾಖಾಮಠದ ಪೂಜ್ಯ ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಆಶೀರ್ವಾದಗಳೊಂದಿಗೆ ಮತ್ತು ಮಿರ್ಜಾನ್ ಶಾಖಾಮಠದ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಬಿಜಿಎಸ್ ಸೆಂಟ್ರಲ್ ಸ್ಕೂಲ್ ಹಾಗೂ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜುಲೈ 29 ರಂದು ‘ಗುರು ಪೂರ್ಣಿಮೆ’ಯನ್ನು ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ವಿದ್ವಾನ್ ಹರೀಶ್ ಭಟ್ ಅವರು ಸಾಂಪ್ರದಾಯಿಕವಾಗಿ ಗುರು ಪಾದುಕಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಕನ್ನಡ ಉಪನ್ಯಾಸಕರಾದ ಶ್ರೀಧರ್ ಹೆಚ್. ಆರ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಹಿನ್ನೆಲೆಯನ್ನು ಹಂಚಿಕೊಂಡರು.

ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಹಿಂದಿ ಉಪನ್ಯಾಸಕಿ ಶ್ರೀಮತಿ ಸೌಭಾಗ್ಯ ಬಾಳೇರಿ ಮಾತನಾಡಿ, “ನಮ್ಮ ಜೀವನದಲ್ಲಿ ಲೌಕಿಕ ಶಿಕ್ಷಣ ನೀಡುವವರು ಶಿಕ್ಷಕರು ಹಾಗೂ ಆಧ್ಯಾತ್ಮಿಕ ಶಿಕ್ಷಣ ನೀಡಿ ಭಗವಂತನ ಸಾಕ್ಷಾತ್ಕಾರ ಮಾಡಿಸುವವರು ಸದ್ಗುರುಗಳು. ಗುರುವಿನ ಕೃಪೆ ಮತ್ತು ಅನುಗ್ರಹವಿದ್ದರೆ ಮಾತ್ರ ಮಾನವನು ಜೀವನದಲ್ಲಿ ಯಶಸ್ಸು ಹಾಗೂ ಶಾಂತಿಯನ್ನು ಗಳಿಸಲು ಸಾಧ್ಯ,” ಎಂದು ಗುರು ಪೂರ್ಣಿಮಾ ಆಚರಣೆಯ ಆಧ್ಯಾತ್ಮಿಕ ಮಹತ್ವವನ್ನು ಉಲ್ಲೇಖಿಸಿದರು.

ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈಭವ:
ಕಾರ್ಯಕ್ರಮದ ಅಂಗವಾಗಿ ಶ್ರೀಧರ ಮತ್ತು ಸಂಗಡಿಗರು ವೇದಘೋಷ ಮೊಳಗಿಸಿದರು. ಕುಮಾರಿ ಅನನ್ಯಾ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರೆ, ಪೂರ್ವಿ ಹಾಗೂ ಸಂಗಡಿಗರು ‘ಗುರುಪಾದುಕಾ ಸ್ತೋತ್ರ’ ಪಠಿಸಿದರು. ವಿದೂಷಿ ಶ್ರೀಮತಿ ರಂಜನಾ ಆಚಾರ್ಯ ಮತ್ತು ವಿದ್ಯಾರ್ಥಿ ವೃಂದದವರಿಂದ ಮೂಡಿಬಂದ ಭಜನಾ ಸಂಕೀರ್ತನೆ ವಾತಾವರಣವನ್ನು ಭಕ್ತಿಮಯಗೊಳಿಸಿತು. ಕುಮಾರ ಅನೀಶ್ ಭಟ್ ಅವರ ಮನಮೋಹಕ കൊളಲು ವಾದನ ಸಭಿಕರ ಜನಮನ ಸೂರೆಗೊಂಡಿತು.
ಸಮಾರಂಭದಲ್ಲಿ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲೆ ಶ್ರೀಮತಿ ಅನುರಾಧಾ ಗುನಗ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರೇಷ್ಮಾ ಬಾಡ್ಕರ್, ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ, ಶಾಲಾ-ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಭಾಷಾ ಶಿಕ್ಷಕಿ ರಂಜನಾ ಪಟಗಾರ ಅವರು ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ನಿರೂಪಿಸಿದರು.


About The Author




More Stories
ಹಿರೇಗುತ್ತಿ ಹೈಸ್ಕೂಲಿನಲ್ಲಿ ಮಕ್ಕಳ ರಕ್ಷಣಾ ಕಾಯ್ದೆಗಳ ಅರಿವು ಜಾಗೃತಿ ಕಾರ್ಯಕ್ರಮ
ಹಿರೇಗುತ್ತಿ ಹೈಸ್ಕೂಲಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ‘ವ್ಯಸನ ಮುಕ್ತ ದಿನಾಚರಣೆ’
ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ