August 24, 2026

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಹಿರೇಗುತ್ತಿ (ಜು. 28): ವಿದ್ಯಾರ್ಥಿಗಳಲ್ಲಿ ಸಮಾನತೆ, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ಸ್ಥಳೀಯ ಸೆಕೆಂಡರಿ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮವಸ್ತ್ರ ವಿತರಿಸಿ ಮಾತನಾಡಿದ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪಿ.ಡಬ್ಲ್ಯೂ.ಡಿ. ಕ್ಲಾಸ್–1 ಗುತ್ತಿಗೆದಾರರಾದ ಗಣಪತಿ ಪಟಗಾರ ಹಿತ್ತಲಮಕ್ಕಿ ಅವರು, “ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ಶಾಲೆಗೆ ಕೊಡುಗೆ ನೀಡುವುದು ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಯ ಕರ್ತವ್ಯವಾಗಿದ್ದು, ತಮ್ಮ ಶಾಲೆಯ ಅಭಿವೃದ್ಧಿಗೆ ಸದಾ ಕೈಜೋಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ‘ಆರೋಗ್ಯ ಕವಚ 108’ ವಿಭಾಗೀಯ ವ್ಯವಸ್ಥಾಪಕರಾದ ಗುರುರಾಜ ಎನ್. ನಾಯಕ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉನ್ನತ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಬೇಕೆಂದು ಪ್ರೇರೇಪಿಸಿದರು.
ಅಂಕೋಲಾದ ಎಸಾನ್ಸಿಯಾ ಹೆಲ್ತ್ ಲ್ಯಾಬೊರೇಟೊರಿ ಮಾಲೀಕರಾದ ಆದರ್ಶ ಬೊಮ್ಮಯ್ಯ ನಾಯಕ ಅವರು ಮಾತನಾಡಿ, “ಸಮಾಜಮುಖಿ ಕಾರ್ಯಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ” ಎಂದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ನಾಗೇಶ ತಿಮ್ಮಣ್ಣ ನಾಯಕ ಅಡ್ಲೂರಮನೆ ಅವರು ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಹಾಗೂ ಸಮಾಜದ ಪ್ರಮುಖರ ಸಹಕಾರ ನಿರಂತರವಾಗಿ ಇರಬೇಕೆಂದು ಅಭಿಪ್ರಾಯಪಟ್ಟರು.


ಶಾಲೆಯ ಮುಖ್ಯಾಧ್ಯಾಪಕರಾದ ವಿಶ್ವನಾಥ ಬೇವಿನಕಟ್ಟಿ ಅವರು ಶಾಲೆಯ ಶೈಕ್ಷಣಿಕ ಸಾಧನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಸ್ತಾವಿಕವಾಗಿ ಮಾತನಾಡಿ, ಉದಾರವಾಗಿ ಸಮವಸ್ತ್ರ ಕೊಡುಗೆ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗರಾಜ ನಾಯಕ, ಬಾಲು ಅಡಿಗೋಣ, ಜಾನಕಿ ಗೊಂಡ, ಶಿಲ್ಪಾ ನಾಯಕ, ಭರತ್ ಭಟ್ಟ, ಮದನ ನಾಯಕ, ಮಹಿಮಾ ಗೌಡ, ಖುಷಿ ಗೌಡ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯಕ ಹಾಗೂ ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಎನ್. ರಾಮು ಹಿರೇಗುತ್ತಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ಮಹಾದೇವ ಗೌಡ ಅವರು ಧನ್ಯವಾದ ಸಮರ್ಪಿಸಿದರು.

About The Author

error: Content is protected !!