August 24, 2026

ಹಿರೇಗುತ್ತಿ ಹೈಸ್ಕೂಲಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ‘ವ್ಯಸನ ಮುಕ್ತ ದಿನಾಚರಣೆ’

ಹಿರೇಗುತ್ತಿ (ಆಗಸ್ಟ್ 1):  ಸ್ಥಳೀಯ ಸೆಕೆಂಡರಿ ಹೈಸ್ಕೂಲಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ನೆನಪಿಗಾಗಿ ‘ವ್ಯಸನ ಮುಕ್ತ ದಿನಾಚರಣೆ’ಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಮಹಾಂತ ಶಿವಯೋಗಿಗಳ ದಿವ್ಯ ಆದರ್ಶಗಳನ್ನು ಸ್ಮರಿಸಿ, ನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ದುಶ್ಚಟ ಹಾಗೂ ವ್ಯಸನಗಳಿಂದ ದೂರವಿದ್ದು, ಉತ್ತಮ ಸಂಸ್ಕಾರ, ಶಿಸ್ತು ಮತ್ತು ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದ ಆದರ್ಶ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಜಾಗೃತಿ ಮೂಡಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯಾಧ್ಯಾಪಕ ವಿಶ್ವನಾಥ ಬೇವಿನಕಟ್ಟಿ ಅವರು, “ವಿದ್ಯಾರ್ಥಿ ದೆಸೆಯಲ್ಲೇ ದುಶ್ಚಟಗಳಿಂದ ದೂರವಿದ್ದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ,” ಎಂದು ತಿಳಿಸಿದರು.
ಶಿಕ್ಷಕ ನಾಗರಾಜ ಜಿ. ನಾಯಕ ಮಾತನಾಡಿ, “ವ್ಯಸನಗಳು ಕೇವಲ ಒಬ್ಬ ವ್ಯಕ್ತಿಯನ್ನಷ್ಟೇ ಅಲ್ಲದೆ, ಇಡೀ ಕುಟುಂಬ ಹಾಗೂ ಸಮಾಜದ ಮೇಲೆಯೂ ಗಂಭೀರ ದುಷ್ಪರಿಣಾಮ ಬೀರುತ್ತವೆ. ಯುವ ಪೀಳಿಗೆ ಈ ಬಗ್ಗೆ ಎಚ್ಚೆತ್ತುಕೊಂಡು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು,” ಎಂದರು.
ವಿಜ್ಞಾನ ಶಿಕ್ಷಕ ಮಹಾದೇವ ಗೌಡ ಮಾತನಾಡಿ, “ತಂಬಾಕು, ಮದ್ಯ ಹಾಗೂ ಮಾದಕ ದ್ರವ್ಯಗಳ ಸೇವನೆಯಿಂದ ಉಂಟಾಗುವ ಆಪತ್ತುಗಳ ಕುರಿತು ಪ್ರತಿಯೊಬ್ಬರೂ ಜಾಗೃತರಾಗಬೇಕು. ವ್ಯಸನಮುಕ್ತ ಬದುಕೇ ಯಶಸ್ವಿ ಜೀವನಕ್ಕೆ ಮೂಲಾಧಾರ,” ಎಂದು ಪ್ರತಿಪಾದಿಸಿದರು.

ಎನ್. ರಾಮು ಹಿರೇಗುತ್ತಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನೂ ಸ್ವಾಗತಿಸಿ, ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಬಿ.ಎಡ್ ವಿದ್ಯಾರ್ಥಿನಿ ಶಾಂತಲಾ ನಾಯಕ ಅವರು ಧನ್ಯವಾದ ಸಮರ್ಪಿಸಿದರು.

ಸಮಾರಂಭದಲ್ಲಿ ಶಿಕ್ಷಕರಾದ ಬಾಲಚಂದ್ರ ಅಡಿಗೋಣ, ಜಾನಕಿ ಗೊಂಡ, ಶಿಲ್ಪಾ ನಾಯಕ, ಭರತ್ ಭಟ್ಟ, ಮದನ ನಾಯಕ, ಮಹಿಮಾ ಗೌಡ, ಖುಷಿ ಗೌಡ, ಬೋಧಕೇತರ ಸಿಬ್ಬಂದಿಗಳಾದ ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಹಾಗೂ ಬಿ.ಎಡ್. ಪ್ರಶಿಕ್ಷಣಾರ್ಥಿಗಳಾದ ಅರುಣ ಗೌಡ, ವೀಣಾ ಗಾಂವಕರ, ಭಾರತಿ ಪಟಗಾರ, ಸಂಪ್ರೀತಿ ನಾಯಕ, ಶಾಂತಲಾ ನಾಯಕ ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿ, ವ್ಯಸನಮುಕ್ತ ಸಮಾಜ ನಿರ್ಮಾಣದ ದೃಢ ಸಂಕಲ್ಪ ಮಾಡಿದರು.

About The Author

error: Content is protected !!